ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿನ ಗ್ಯಾರಂಟಿ ಮನೆ ಮನೆಗೆ ಬಾರ್ ಭಾಗ್ಯವೇ…? ಎಂದು ಪ್ರಶ್ನಿಸುವ ಮೂಲಕ ರಾಜ್ಯ ಬಿಜೆಪಿ ಕಾಂಗ್ರೆಸ್ ಕಾಲೆಳೆದಿದೆ.
ಕಾರ್ಕಳ ಕಾಂಗ್ರೆಸ್ ಮುಖಂಡನ ಮನೆಯಲ್ಲಿ 2360 ಲೀಟರ್ ಅಕ್ರಮ ಮದ್ಯ ಪತ್ತೆಯಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರು, ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಜನಪರ ಆಡಳಿತದ ಮೂಲಕ ದೇಶವನ್ನು ವಿಶ್ವದ ಮುಂಚೂಣಿ ಸ್ಥಾನಕ್ಕೇರಿಸಲು ಶ್ರಮಿಸುತ್ತಿರುವ ಪ್ರಧಾನಿ ಮೋದಿ ಅವರ ಹೆಸರೆತ್ತಲೂ ನೈತಿಕತೆ ಇಲ್ಲದ ಕಳಂಕಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿನ ಗ್ಯಾರಂಟಿ ಮನೆ ಮನೆಗೆ ಬಾರ್ ಭಾಗ್ಯವೇ? ಎಂದು ಪ್ರಶ್ನಿಸಿದ್ದಾರೆ.
ಹಗರಣಗಳ ಸರಮಾಲೆಯನ್ನೇ ಧರಿಸಿರುವ ಕಾಂಗ್ರೆಸ್ ಸರ್ಕಾರ 700 ಕೋಟಿ ರೂ. ಮೌಲ್ಯದ ಅಬಕಾರಿ ಹಗರಣದ ಮಧ್ಯೆಯೇ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂಗ್ರೆಸ್ ಮುಖಂಡ, ಬೋಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಬೋಳ ಸೊಸೈಟಿಯ ನಿರ್ದೇಶಕ ಹಾಗೂ ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರ ಪರಮಾಪ್ತ ಎನಿಸಿಕೊಂಡಿರುವ ಬೋಳದ ಅವಿನಾಶ್ ಮಲ್ಲಿ ಮನೆಯಲ್ಲಿ 70 ಲಕ್ಷಕ್ಕೂ ಅಧಿಕ ಮೌಲ್ಯದ 200ಕ್ಕೂ ಅಧಿಕ ವಿಸ್ಕಿ ಬಾಟಲಿಗಳ ಸಂಗ್ರಹ ಪತ್ತೆಯಾಗಿರುವುದು ಆತಂಕ ಮೂಡಿಸಿದೆ.
ಅಬಕಾರಿ ಉಪ ಆಯುಕ್ತೆ ಬಿಂದು ಅವರ ನೇತೃತ್ವದಲ್ಲಿ ಅವಿನಾಶ್ ಮಲ್ಲಿ ಮನೆಗೆ ದಾಳಿ ನಡೆಸಿರುವ ಅಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಬ್ರಾಂಡೆಡ್ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿರುವ ಪ್ರಕರಣ ರಾಜ್ಯ ಕಾಂಗ್ರೆಸ್ ಸರಕಾರದ ಸಾಚಾತನದ ಮುಖವಾಡವನ್ನು ಕಳಚಿದೆ.