ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಮರುಸ್ಥಾಪಿಸಲು ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದಲ್ಲಿ ಹೋರಾಟ ನಡೆಸುವುದಾಗಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸುಳಿವು ನೀಡಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.
ಶ್ರೀನಗರದಲ್ಲಿ ನನ್ನೆ ನಡೆದ ಕಾರ್ಯಕ್ರಮದ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನ ಮರುಸ್ಥಾಪಿಸಲು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕಾಗಿದೆ ಎಂದರು.
ಆಗಸ್ಟ್ 5, 2019 ರಂದು, ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿತು.
ಲೋಕಸಭೆ ಮತ್ತು ಅಸೆಂಬ್ಲಿ ಚುನಾವಣೆಗಳಲ್ಲಿ ರಾಜ್ಯ ಸ್ಥಾನವನ್ನು ಮರುಸ್ಥಾಪಿಸುವ ಬಗ್ಗೆ ಪಿಎಂ ಮೋದಿ ಅವರು ಜಮ್ಮು-ಕಾಶ್ಮೀರ ಜನತೆಗೆ ನೀಡಿದ ಭರವಸೆಯನ್ನು ಈಡೇರಿಸುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದರು.
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳೆರಡರಲ್ಲೂ ಜನರು ಯಾವುದೇ ಭಯವಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ರಾಜ್ಯಸ್ಥಾನಮಾನ ಮರುಸ್ಥಾಪನೆ ಕುರಿತು ತಮಗೆ ನೀಡಿದ ಭರವಸೆಯನ್ನು ಈಡೇರುವ ಭರವಸೆಯಿಂದ ವಿಧಾನಸಭೆ ಚುನಾವಣೆಯನ್ನು ಜನರು ಯಶಸ್ವಿಗೊಳಿಸಿದ್ದಾರೆ ಎಂದರು.
ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಜಾರ್ಖಂಡ್ ಮತ್ತು ಮಹಾರಾಷ್ಟ್ರ ಚುನಾವಣೆ ಮುಗಿಸಿ ಈಗ ಸ್ವಲ್ಪ ವಿರಾಮವಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರೊಂದಿಗೆ ಮಾತನಾಡುತ್ತೇನೆ. ಇದರಿಂದ ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ತರಲಾಗುವುದು ಎಂಬ ವಿಶ್ವಾಸ ನನಗಿದೆ ಎಂದರು.
ಆರ್ಟಿಕಲ್ 370 ರದ್ದತಿಯ ನಂತರ ಜಮ್ಮು-ಕಾಶ್ಮೀರದಲ್ಲಿ ನಡೆದ ಮೊದಲ ಅಸೆಂಬ್ಲಿ ಚುನಾವಣೆಯಲ್ಲಿ ಗೆದ್ದ ನ್ಯಾಷನಲ್ ಕಾನ್ಫರೆನ್ಸ್ ರಾಜ್ಯತ್ವವನ್ನು ಮರುಸ್ಥಾಪಿಸಲು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ವಾಗ್ದಾನ ಮಾಡಿತ್ತು.
ಅಕ್ಟೋಬರ್ 19 ರಂದು ಒಮರ್ ಸರ್ಕಾರದ ಮೊದಲ ಕ್ಯಾಬಿನೆಟ್ ಸಭೆಯು ರಾಜ್ಯತ್ವವನ್ನು ಮರುಸ್ಥಾಪಿಸುವ ನಿರ್ಣಯವನ್ನು ಅಂಗೀಕರಿಸಿತು. ರಾಜ್ಯತ್ವದ ಮರುಸ್ಥಾಪನೆ ಪ್ರಕ್ರಿಯೆ ಪ್ರಾರಂಭವಾಗಿದೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ನಿರ್ಣಯವನ್ನು ಅಂಗೀಕರಿಸಿದ ನಂತರ, ಒಮರ್ ಅವರು ಪ್ರಧಾನಿ ಮೋದಿ, ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಇತರ ಕೇಂದ್ರ ಸಚಿವರನ್ನು ಭೇಟಿಯಾಗಿ ನಿರ್ಣಯದ ಪ್ರತಿಗಳನ್ನು ಅವರಿಗೆ ನೀಡಿದರು.
ಒಮರ್ ಅಬ್ದುಲ್ಲಾ ಅವರಿಗೆ ನಿಕಟವಾಗಿರುವ ಹಿರಿಯ ಎನ್ಸಿ ನಾಯಕ ಮತ್ತು ಶಾಸಕ ತನ್ವಿರ್ ಸಾದಿಕ್, ರಾಜ್ಯ ಸ್ಥಾನಮಾನ ಮರುಸ್ಥಾಪನೆ ಕುರಿತು ಮೋದಿ, ಶಾ ಮತ್ತು ಇತರ ಕೇಂದ್ರ ಸಚಿವರೊಂದಿಗೆ ಸಿಎಂ ನಡೆಸಿದ ಮಾತುಕತೆ ಸಕಾರಾತ್ಮಕವಾಗಿದೆ ಎಂದಿದ್ದಾರೆ.