ಬೆಳಗಾವಿ: ಮುಂದಿನ ಮೂರು ದಿನಗಳಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಿರ್ಧರಿಸಿದ್ದೇವೆ. ವಿರೋಧ ಪಕ್ಷಗಳು ಯಾವ ವಿಷಯಗಳನ್ನು ಎತ್ತಬಹುದೆಂದು ನಾವು ಊಹಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.
ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವಕ್ಫ್ ಸಮಸ್ಯೆಗೆ ಸಂಬಂಧಿಸಿದಂತೆ, “ನಾವು ಇನ್ನೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ ಮತ್ತು ಚರ್ಚೆ ಪೂರ್ಣಗೊಂಡಿಲ್ಲ. ಅವರು ಈ ವಿಷಯವನ್ನು ಪ್ರಸ್ತಾಪಿಸುತ್ತಾರೋ ಅಥವಾ ಉತ್ತರ ಕರ್ನಾಟಕದ ಸಮಸ್ಯೆಗಳತ್ತ ಗಮನ ಹರಿಸುತ್ತಾರೋ ಗೊತ್ತಿಲ್ಲ. ಉತ್ತರಿಸಲು ಮತ್ತು ಚರ್ಚೆಗೆ ಸರ್ಕಾರ ಸಿದ್ಧವಾಗಿದೆ ಎಂದರು.
ಬಿವೈ ವಿಜಯೇಂದ್ರ ಅವರು 150 ಕೋಟಿ ರೂ. ಆಮಿಷವೊಡ್ಡಿರುವುದಾಗಿ ಮುಖ್ಯಮಂತ್ರಿಗಳು ಹೇಳಿರುವುದು ಸುಳ್ಳು ಎಂದ ಅನ್ವರ್ ಮಾಣಿಪ್ಪಾಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, “ಮಾಣಿಪ್ಪಾಡಿ ಅವರು ಈ ಹಿಂದೆಯೇ ಹೇಳಿಕೆ ನೀಡಿದ್ದಾರೆ. ಈಗ ಯೂಟರ್ನ್ ಹೊಡೆದಿದ್ದಾರೆ ಎಂದರು.
ಅವರ ಹೇಳಿಕೆಯನ್ನು ಆಧರಿಸಿ ನಾವು ಪ್ರತಿಕ್ರಿಯಿಸಿದ್ದೇವೆ. ಅವರು ಅದನ್ನು ಸುಳ್ಳು ಎಂದು ಹೇಳಿದರೆ, ನಾವು ಏನು ಮಾಡಬಹುದು? ನನ್ನ ದೃಷ್ಟಿಯಲ್ಲಿ, ನಾನು ಸೂಕ್ತವಾಗಿ ಪ್ರತಿಕ್ರಿಯಿಸಿದ್ದೇನೆ. 150 ಕೋಟಿ ಆಫರ್ ಮಾಡಲಾಗಿದೆ. ಅವರು ಆರೋಪಗಳನ್ನು ಮಾಡುತ್ತಿರುವ ವಿಡಿಯೊ ರೆಕಾರ್ಡಿಂಗ್ ಇದೆ. ಈಗ ಹಲವು ವರ್ಷಗಳ ನಂತರ ಅದನ್ನು ನಿರಾಕರಿಸುತ್ತಿದ್ದಾರೆ. ನಾವೇನು ಮಾಡಬೇಕು?” ಎಂದರು.
ಪ್ರತಿಭಟನಾಕಾರರ ಮೇಲೆ ನಡೆದ ಲಾಠಿ ಪ್ರಹಾರಕ್ಕೆ ಸಂಬಂಧಿಸಿದಂತೆ ಕೂಡಲಸಂಗಮ ಪಂಚಮಸಾಲಿ ಪೀಠದ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮಿ ಅವರ ಕ್ಷಮೆ ಯಾಚಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದ್ದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಜೋಶಿ ಅವರು ಅಧಿಕಾರದಲ್ಲಿದ್ದಾಗ ಈ ಬಗ್ಗೆ ಏಕೆ ಹೇಳಲಿಲ್ಲ? ಯಾರು ಕ್ಷಮೆ ಕೇಳಬೇಕು? ಲಿಂಗಾಯತ ಪಂಚಮಸಾಲಿ ಸಮುದಾಯದ ಮೀಸಲಾತಿ ಬೇಡಿಕೆ ಈಡೇರಿಸಲು ವಿಫಲವಾಗಿರುವ ಬಿಜೆಪಿ ಕ್ಷಮೆಯಾಚಿಸಬೇಕು ಎಂದು ತಿರುಗೇಟು ನೀಡಿದರು.