ಬೆಂಗಳೂರು: ಜಾತಿನಿಂದನೆ, ಜೀವ ಬೆದರಿಕೆ ಪ್ರಕರಣದಲ್ಲಿ ಬಂಧಿತರಾಗಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಅವರ ವಿಚಾರಣೆ ತೀವ್ರವಾಗಿ ನಡೆಯುತ್ತಿದೆ.ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದ ಅವಧಿ ಇಂದಿಗೆ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಚಾರಣಾಧಿಕಾರಿಯಾಗಿರುವ ಶೇಷಾದ್ರಿಪುರಂ ಎಸಿಪಿ ಪ್ರಕಾಶ್ ರೆಡ್ಡಿ ಅವರ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ.
ಜಾತಿನಿಂದನೆ ಮಾಡಿದ ಆರೋಪದ ಮೇಲೆ ಬಿಡುಗಡೆಯಾಗಿದೆ ಎನ್ನಲಾದ ಆಡಿಯೋ ಪರೀಕ್ಷೆಗೆ ಮುಂದಾಗಿರುವ ಪೊಲೀಸರು ಮುನಿರತ್ನ ಅವರ ಧ್ವನಿಪರೀಕ್ಷೆ ಮಾದರಿ ಸಂಗ್ರಹ ಮಾಡಲಿದ್ದು, ತದನಂತರ ಜೀವಬೆದರಿಕೆಪ್ರಕರಣ ಸಂಬಂಧಪಟ್ಟಂತೆ ಅವರ ವಿಚಾರಣೆ ನಡೆಯಲಿದೆ ಎಂದು ಹೇಳಲಾಗಿದೆ. ಸಂಜೆ ವೇಳೆಗೆ ಮುನಿರತ್ನ ಅವರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುವುದು.
ಮತ್ತೊಂದೆಡೆ ಒಕ್ಕಲಿಗೆ ಸಮುದಾಯದ ಶಾಸಕರು ಇಂದುಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅವಹೇಳನಕಾರಿ ಮಾತುಗಳನ್ನಾಡಿರುವ ಶಾಸಕ ಮುನಿರತ್ನ ವಿರುದ್ಧ ಕ್ರಮ ಜರುಗಿಸಬೇಕೆಂದು ಮನವಿ ನೀಡಿ ಆಗ್ರಹಪಡಿಸಿದ್ದಾರೆ.ಈ ನಿಯೋಗದಲ್ಲಿ ಶಾಸಕರಾದ ಮಾಗಡಿಯ ಬಾಲಕೃಷ್ಣ, ಶಿರಾದ ಟಿ.ಬಿ. ಜಯಚಂದ್ರ, ಕುಣಿಗಲ್ ರಂಗನಾಥ್, ಸಚಿವ ಎಂ.ಸಿ. ಸುಧಾಕರ್, ವಿಧಾನಪರಿಷತ್ ಸದಸ್ಯ ಪುಟ್ಟಣ್ಣ, ಕಾಂಗ್ರಮುಖಂಡ ಹನುಮಂತರಾಯ್ಯ ಇದ್ದರು ಎಂದು ಹೇಳಲಾಗಿದೆ.