ಬೆಂಗಳೂರು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ನಡೆಸಿದ ಸಂಧಾನ ಸಭೆ ವಿಫಲವಾಗಿದ್ದು, ಕೊರೆಯುವ ಚಳಿಯಲ್ಲೂ ಆಶಾ ಕಾರ್ಯಕರ್ತೆಯರು ತಮ್ಮ ಮುಷ್ಕರವನ್ನು ಮುಂದುವರೆಸಿದ್ದಾರೆ.
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸರ್ಕಾರದ ವಿರುದ್ದ ಆಶಾ ಕಾರ್ಯಕರ್ತೆಯರು ಫ್ರೀಡಂಪಾರ್ಕ್ನಲ್ಲಿ ( ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಬುಧವಾರ ರಾತ್ರಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ದಿನೇಶ್ ಗುಂಡೂರಾವ್ ಅವರು, ಮಾಸಿಕ 8 ಸಾವಿರ ರೂ. ಬದಲಿಗೆ 9,500 ರೂಪಾಯಿ ನೀಡುವ ಭರವಸೆ ನೀಡಿದ್ದರು.
ಮುಷ್ಕರ ಕೈ ಬಿಟ್ಟು ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸಹಕಾರ ನೀಡಬೇಕು. ಹೆಚ್ಚಿನ ಪ್ರೋತ್ಸಾಹಧನ ಕೇಂದ್ರ ಸರಕಾರದ ಅನುದಾನದ ಮೇಲೆ ಒದಗಿಸಲಾಗುತ್ತಿದೆ. ಆರ್.ಸಿ.ಎಚ್ ಪೊರ್ಟಲ್ನಲ್ಲಿ ಆಶಾ ಕಾರ್ಯಕರ್ತೆಯರ ಕಾರ್ಯ ಚಟುವಟಿಕೆಗಳ ಆಧಾರದ ಮೇಲೆ ಪ್ರೋತ್ಸಾಹಧನ ಲಭ್ಯವಾಗುತ್ತದೆ. ಪ್ರಸ್ತುತ ಗೌರವಧನ ಹಾಗೂ ಪ್ರೋತ್ಸಾಹಧನ ಸೇರಿ ಸರಾಸರಿ ಒಬ್ಬ ಆಶಾ ಕಾರ್ಯಕರ್ತೆಗೆ ಮಾಸಿಕ 9,500 ರೂ.ಪಾವತಿ ಮಾಡಲಾಗುತ್ತಿದೆ. ಇದನ್ನು ಮುಂಗಡವಾಗಿ ಆಶಾ ಕಾರ್ಯಕರ್ತೆಯರಿಗೆ ಒದಗಿಸಲು ಸರ್ಕಾರ ಸಿದ್ಧವಿದೆ. ಆದರೆ, ಗೌರವಧನದ ಹೊರತಾಗಿ ಆಶಾ ಕಾರ್ಯಕರ್ತೆಯರಿಗೆ ಲಭ್ಯವಾಗುತ್ತಿರುವ ಪ್ರೋತ್ಸಾಹಧನವನ್ನೂ ಮಾಸಿಕ ವೇತನದ ರೂಪದಲ್ಲಿ ನಿಗದಿಪಡಿಸಿ ನೀಡುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟ ಎಂದು ಹೇಳಿದರು.