ಮುಂಬೈ: ಮುಂಬೈ ಕರಾವಳಿಯಲ್ಲಿ ಸಂಭವಿಸಿದ್ದ ದೋಣಿಗಳ ಡಿಕ್ಕಿ ಅವಘಡದಲ್ಲಿ ನಾಪತ್ತೆಯಾಗಿದ್ದ ಏಳು ವರ್ಷದ ಬಾಲಕನ ಮೃತದೇಹ ಶನಿವಾರ ಪತ್ತೆಯಾಗಿದ್ದು, ಇದರೊಂದಿಗೆ ದುರ್ಘಟನೆಯಲ್ಲಿ ಮೃತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ಮೂರು ದಿನಗಳ ಶೋಧ ಕಾರ್ಯಾಚರಣೆಯ ನಂತರ ಇಂದು ಬೆಳಿಗ್ಗೆ ಬಾಲಕ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಜೋಹಾನ್ ಮೊಹಮ್ಮದ್ ನಿಸಾರ್ ಅಹಮದ್ ಪಠಾಣ್ ಎಂಬ ಬಾಲಕನ ಮೃತದೇಹವನ್ನು ಪತ್ತೆ ಮಾಡಲಾಗಿದ್ದು, ಇದರೊಂದಿಗೆ ಡಿಸೆಂಬರ್ 18 ರಂದು ಸಂಭವಿಸಿದ ದುರಂತ ಪ್ರಕರಣದಲ್ಲಿ ಮೃತರ ಸಂಖ್ಯೆ 15 ಕ್ಕೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.
ಈ ನಡುವೆ ದುರ್ಘಟನೆಗೆ ಸಂಬಂಧಿಸಿದಂತೆ ನೌಕಾಪಡೆ ತನಿಖೆ ಪ್ರಾರಂಭಿಸಿದ್ದು, ನಾಪತ್ತೆಯಾಗಿರುವ ಪ್ರಯಾಣಿಕರ ಪತ್ತೆಗೆ ನೌಕಾಪಡೆಯ ಹೆಲಿಕಾಪ್ಟರ್ ಮತ್ತು ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ನ ದೋಣಿಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಎರಡೂ ದೋಣಿಗಳಲ್ಲಿದ್ದ 113 ಜನರಲ್ಲಿ 15 ಮಂದಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಇನ್ನುಳಿದಂತೆ 98 ಜನರನ್ನು ರಕ್ಷಿಸಲಾಗಿದೆ. ನೌಕಾಪಡೆಯ ಕ್ರಾಫ್ಟ್ನಲ್ಲಿ ಆರು ಜನರಿದ್ದರು, ಅದರಲ್ಲಿ ಇಬ್ಬರು ಬದುಕುಳಿದಿದ್ದಾರೆಂದು ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ನೌಕಾಪಡೆಯ ಸ್ಪೀಡ್ಬೋಟ್ ಚಾಲಕನ ವಿರುದ್ಧ ಕೊಲಾಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಬುಧವಾರ ಮಧ್ಯಾಹ್ನ ಗೇಟ್ವೇ ಆಫ್ ಇಂಡಿಯಾದಿಂದ ಎಲಿಫೆಂಟಾ ದ್ವೀಪಕ್ಕೆ 100ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ‘ನೀಲ್ ಕಮಲ್’ ಎಂಬ ಪ್ರಯಾಣಿಕ ದೋಣಿಗೆ ನೌಕಾಪಡೆಯ ಸ್ಪೀಡ್ಬೋಟ್ ಡಿಕ್ಕಿ ಹೊಡೆದಿತ್ತು. ದುರಂತದಲ್ಲಿ ನೌಕಾಪಡೆಯ ಸಿಬ್ಬಂದಿ ಮತ್ತು ಇಬ್ಬರು ಗುತ್ತಿಗೆ ನೌಕಾ ಸಿಬ್ಬಂದಿ ಸೇರಿದಂತೆ 13 ಜನರು ಸಾವನ್ನಪ್ಪಿದ್ದರು.