ರಾಮನಗರ: ಮುಡಾ ಹಗರಣದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಹೈಕೋರ್ಟ್ ಮತ್ತು ಜನಪ್ರತಿನಿಧಿಗಳ ನ್ಯಾಯಾಲಯಗಳ ತೀರ್ಪಿನ ನಂತರ ರಾಜ್ಯ ಸರ್ಕಾರ ಅಪರಾಧಿ ಸ್ಥಾನದಲ್ಲಿ ನಿಂತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ಮುಖ್ಯ ವಕ್ತಾರ ಅಶ್ವಥ್ನಾರಾಯಣ್ಗೌಡ ಹೇಳಿದರು.
ನಗರದ ವಿವೇಕಾನಂದನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಾಲ್ಮೀಕಿ ನಿಗಮದ ಹಗರಣದಲ್ಲಿ ನಾಗೇಂದ್ರ ಮೇಲೆ ಗಂಭೀರ ಆರೋಪವಿದೆ. ಮೂಡಾದಲ್ಲಿ 5 ಸಾವಿರ ಕೋಟಿ ಅವ್ಯವಹಾರ ನಡೆದಿದೆ. ಇದನ್ನು ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳು ಮೈಸೂರುವರೆಗೆ ಪಾದಯಾತ್ರೆ ಮೂಲಕ ಹೋರಾಟ ಮಾಡಿದೆವು, ನ್ಯಾಯಾಲಯದ ತೀರ್ಪು ಸಿಎಂ ವಿರುದ್ದವಾಗಿದೆ.
ಆರೋಪ ಬಂದ ತಕ್ಷಣ ಸಿಎಂ ರಾಜೀನಾಮೆ ಕೊಟ್ಟು ಮಾಜಿ ಮುಖ್ಯಮಂತ್ರಿಯಾಗಿ ತನಿಖೆ ಎದುರಿಸಬೇಕೆಂಬುದು ಬಿಜೆಪಿ ಪಕ್ಷದ ಒತ್ತಾಯವಾಗಿದೆ ಎಂದರು.
ದೂರುದಾರ ಸ್ನೇಹಮಯಿ ಕೃಷ್ಣ ಅವರು ಎಫ್ಐಆರ್ ದಾಖಲಿಸದಿರುವುದರ ವಿರುದ್ದ ದೂರು ದಾಖಲಿಸಲು ಮೈಸೂರು ಲೋಕಾಯುಕ್ತ ಎಸ್ಪಿಸಿಕ್ಕಿಲ್ಲ, ಇದು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ಮತ್ತೊಂದೆಡೆ ರಾಜ್ಯಪಾಲರ ಯಾವುದೇ ಪತ್ರಕ್ಕೂ ಸಂಪುಟದ ಗಮನಕ್ಕೆ ತರದೆ ಯಾವುದೇ ಉತ್ತರ ನೀಡಬಾರದು ಎಂದು ತೀರ್ಮಾನ ಮಾಡಿರುವುದು ಕೆಟ್ಟ ಸಂಪ್ರದಾಯವಾಗಿದೆ.
ರಾಜ್ಯದಲ್ಲಿ ಲೋಕಾಯುಕ್ತಕ್ಕೆ ಬೀಗ ಹಾಕಿ ತಮಗೆ ಅನುಕೂಲವಾಗುವ ಎಸ್ಐಟಿ ರಚಿಸಿಕೊಂಡಿದ್ದು, ಸಿಬಿಐ ರಾಜ್ಯಕ್ಕೆ ಬರಬಾರದು ಎಂದು ತಮಿಳುನಾಡು ಕೇರಳ ಪಶ್ಚಿಮ ಬಂಗಾಳ ಮಾದರಿ ನಿಷೇದ ಹಾಕಿದ್ದಾರೆ. ಸಿಸಿಬಿ ದೂರವಿಡುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು ಮೈಸೂರಿನ ಲೋಕಾಯುಕ್ತದಲ್ಲಿ ನ್ಯಾಯ ಸಿಗುವ ಅನುಮಾನ ವಿದೆ ಆಗಾಗಿ ಪ್ರಕರಣವನ್ನು ಸಿಬಿಐಗೆ ನೀಡುವುದು ಸೂಕ್ತ ಎಂದು ಹೇಳಿದರು.
ಸಿದ್ದರಾಮಯ್ಯ ರಾಜೀನಾಮೆ ಕೊಡುವುದಿಲ್ಲ ಎಂದರೆ ನಮ್ಮ ಹೋರಾಟವನ್ನು ಕಾನೂನಾತ್ಮಕವಾಗಿ ರಾಜ್ಯಾದ್ಯಂತ ಹೋರಾಟ ಮಾಡುವ ಜೊತೆಗೆ ದೆಹಲಿಗೂ ಹೋರಾಟ ತೆಗೆದುಕೊಂಡು ಹೋಗಲಾಗುವುದು. ಎನ್ಡಿಎ ಅಭಿಪ್ರಾಯವೇ ಬೇರೆ, ಕುಮಾರಸ್ವಾಮಿ ಹೇಳಿರುವುದು ಅವರ ವಯುಕ್ತಿಕ ಅಭಿಪ್ರಾಯ. ಮೂಡಾದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ನಿವೇಶನ ಪಡೆದಿದ್ದಾರೆ ಎನ್ನುವ ಕಾಂಗ್ರೆಸ್ನವರು ಅವರನ್ನು ರಾಜ್ಯದ ಸಿಎಂ ಮಾಡಿದ್ದಾಗ ಏಕೆ ಮೂಡಾ ಹಗರಣ ಬಗ್ಗೆ ಚರ್ಚೆ ಮಾಡಲಿಲ್ಲ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಟಿಯಲ್ಲಿ ಕೆಎಸ್ಐಸಿ ಮಾಜಿ ಅಧ್ಯಕ್ಷ ಗೌತಮ್ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಆನಂದಸ್ವಾಮಿ, ಉಪಾಧ್ಯಕ್ಷ ಸುರೇಶ್, ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ರುದ್ರದೇವರು, ನಗರ ಮಂಡಲ ಮಾಜಿ ಅಧ್ಯಕ್ಷ ಶಿವಾನಂದ, ನಗರಸಭೆ ಮಾಜಿ ಸದಸ್ಯ ನಾಗೇಶ್, ಮಾಧ್ಯಮ ಸಂಚಾಲಕ ಚೇತನ್, ಮುಖಂಡರಾದ ಚಂದ್ರು, ಪುಷ್ಪಲತಾ ಮತ್ತಿತರರು ಇದ್ದರು.