ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬುಧವಾರ (ಜನವರಿ 15) ಮಹತ್ವದ ದಿನವಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಆರ್ಟಿಐ ಕಾರ್ಯರಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ನಡೆಸಲಿದೆ.
ಮುಖ್ಯಮಂತ್ರಿಗಳ ಪರವಾಗಿ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಮತ್ತು ಮನು ಸಿಂಘ್ವಿ, ರಾಜ್ಯ ಸರ್ಕಾರದ ಪರವಾಗಿ ಕಪಿಲ್ ಸಿಬಲ್, ಎಜಿ ಶಶಿಕಿರಣ್ ಶೆಟ್ಟಿ ಮತ್ತು ಹಿಂದಿನ ಭೂ ಮಾಲೀಕ ದೇವರಾಜು ಪರ ದುಷ್ಯಂತ್ ದವೆ ಅವರು ನ್ಯಾ.ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠದ ಮುಂದೆ ವಾದಿಸಲಿದ್ದಾರೆ. ಸ್ನೇಹಮಯಿ ಕೃಷ್ಣ ಪರವಾಗಿ ಕೆಜಿ ರಾಘವನ್ ವಾದ ಮಂಡಿಸಲಿದ್ದಾರೆ.
ಲೋಕಾಯುಕ್ತ ಪೊಲೀಸರು ಸಲ್ಲಿಸಬೇಕಿದ್ದ ತನಿಖೆಯ ಅಂತಿಮ ವರದಿ ಗಡುವನ್ನು ಹೈಕೋರ್ಟ್ ಜನವರಿ 28ರವರೆಗೆ ವಿಸ್ತರಿಸಿದೆ.
ಪ್ರಕರಣದ ಬಗ್ಗೆ ಇಂದು ಅಂತಿಮ ತೀರ್ಪು ಬರುವ ವಿಶ್ವಾಸವಿದೆ. ಸಿಬಿಐಗೆ ವಹಿಸಲು ಅವಶ್ಯಕವಿರುವ ದಾಖಲೆಗಳನ್ನು ನೀಡಲಾಗಿದೆ. ಕೋರ್ಟ್ಗೆ ಮನವಿ ಮಾಡಿದ ನಂತರ ಸಾಕಷ್ಟು ಬೆಳವಣಿಗೆ ಆಗಿದೆ. ನನಗೆ ಆಮಿಷವೊಡ್ಡಲಾಗಿದೆ, ಒತ್ತಡ, ಬೆದರಿಕೆ ಕೂಡ ಹಾಕಲಾಗಿದೆ. ಈ ಎಲ್ಲಾ ವಿಚಾರಗಳನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದೇವೆ. ಲೋಕಾಯುಕ್ತ ತನಿಖೆ ಬಗ್ಗೆ ವಿಶ್ವಾಸವಿಲ್ಲ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದರು.
ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯಿಂದ ಪಾರದರ್ಶಕ ತನಿಖೆ ಸಾಧ್ಯವಿಲ್ಲ. ಸಿಬಿಐ ತನಿಖೆಯಿಂದ ಮಾತ್ರ ನ್ಯಾಯ ಸಿಗುವ ವಿಶ್ವಾಸವಿದೆ. ಸಿಬಿಐಗೆ ಬಹಿ ಸಿಎಂ ಸಿದ್ದರಾಮಯ್ಯ ಪ್ರಕರಣ ವಹಿಸಿದ ಮೇಲೆ ರಾಜೀನಾಮೆ ನೀಡುತ್ತಾರೆ ಅನ್ನೋ ವಿಶ್ವಾಸವಿದೆ. ಆಗ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುವ ಕೆಲಸ ಆಗುತ್ತದೆ. ಗುರಿ ತಲುಪುವವರೆಗೂ ನನ್ನ ಹೋರಾಟ ಮುಂದುವರಿಯುತ್ತದೆ ಎಂದರು.