ಬೆಂಗಳೂರು: ಅತ್ಯಾಚಾರ, ಕೊಲೆ ಬೆದರಿಕೆ ಸೇರಿದಂತೆ ಕೆಲ ಪ್ರಕರಣಗಳಲ್ಲಿ ಬಂಧಿತರಾಗಿರುವ ಶಾಸಕ ಮುನಿರತ್ನ ಅವರ ನಿವಾಸದ ಮೇಲೆ ಇಂದು ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವೈಯಾಲಿಕಾವಲ್ನಲ್ಲಿರುವ ಮುನಿರತ್ನ ಅವರ ನಿವಾಸ ಸೇರಿದಂತೆ ಡಾಲರ್ಸ್ ಕಾಲೋನಿಯ ಕಚೇರಿ, ಕೇಬಲ್ ಕಚೇರಿ, ಆರ್ ಆರ್ನಗರ ಕಚೇರಿ, ಜೆಪಿ ಪಾರ್ಕ್ ಬಳಿಯಿರುವ ಗೋದಾಮು ಸೇರಿದಂತೆ ಒಟ್ಟು 12 ಕಡೆ ದಾಳಿ ನಡೆಸಲಾಗಿದೆ.
ಎಫ್ಎಸ್ಎಲ್ ಟೀಮ್ನೊಂದಿಗೆ ಆಗಮಿಸಿರುವ ಎಸ್ಐಟಿ ಅಧಿಕಾರಿಗಳು ತೀವ್ರ ತಪಾಸಣೆ ನಡೆಸಿದ್ದಾರೆ. ಎಸಿಪಿ ಕವಿತಾ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಸಾಕ್ಷ್ಯಗಳ ಸಂಗ್ರಹಕ್ಕಾಗಿ ದಾಳಿ ನಡೆದಿದೆ ಎನ್ನಲಾಗಿದೆ. ದಾಳಿ ವೇಳೆ ನಡೆಯುತ್ತಿರುವ ಪರಿಶೀಲನೆಯನ್ನು ಎಸ್ಪಿ ಸೌಮ್ಯಲತಾ ಅವರು ಖುದ್ದಾಗಿ ಬಂದು ವೀಕ್ಷಿಸಿ ಪುನಃ ಅಲ್ಲಿಂದ ತೆರಳಿದ್ದಾರೆ.