ಉಡುಪಿ: ಮುಸ್ಲಿಮರಿಂದ ಮತದಾನದ ಹಕ್ಕನ್ನು ವಾಪಸ್ ಪಡೆಯಬೇಕು ಎಂದು ಹೇಳಿರುವ ಚಂದ್ರಶೇಖರನಾಥ ಸ್ವಾಮೀಜಿ ಮೇಲೆ ಎಫ್ಐಆರ್ ದಾಖಲಿಸಿರುುದನ್ನು ವಿರೋಧಿಸುತ್ತಿರುವ ಬಿಜೆಪಿಯವರು ಸ್ವಾಮೀಜಿ ಹೇಳಿದಂತೆ ಹೇಳಲಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಶನಿವಾರ ಸವಾಲು ಹಾಕಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರಾಷ್ಟ್ರದಲ್ಲಿ ಸಂವಿಧಾನ ಇಲ್ಲವೇ? ನಾವು ರಾಷ್ಟ್ರವ್ಯಾಪಿ ಸಂವಿಧಾನ ದಿನವನ್ನು ಸಂಭ್ರಮದಿಂದ ಆಚರಿಸಲಿಲ್ಲವೇ? ಸಂವಿಧಾನ ಎಲ್ಲರಿಗೂ ಅನ್ವಯವಾಗಬೇಕಲ್ಲವೇ? ಎಂದು ಪ್ರಶ್ನಿಸಿದರು.
ಸ್ವಾಮೀಜಿ ಹೇಳಿದ್ದನ್ನು ಬಿಜೆಪಿಯವರು ಹೇಳಲಿ ನೋಡೋಣ… ಸ್ವಾಮೀಜಿಗಳು ಇರುವುದು ಸಮಾಜದ ಸ್ವಾಸ್ಥ್ಯ ಕಾಪಾಡಲು ಸಲುವಾಗಿಯೇ ಹೊರತು, ಕೆಡಿಸಲು ಅಲ್ಲ. ಸ್ವಾಮೀಜಿಗಳ ಬಗ್ಗೆ ಮಾತನಾಡುವಷ್ಟು ಅರ್ಹತೆ ನನಗಿಲ್ಲ. ಅವರು ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು. ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ಭಾರತದಲ್ಲಿ ಇದ್ದೇವೆ. ಈ ದೇಶದಲ್ಲಿ ರಾಷ್ಟ್ರಪತಿಯಿಂದ ಹಿಡಿದು ಸಾಮಾನ್ಯ ಜನರವರೆಗೆ ಎಲ್ಲರಿಗೂ ಒಂದೇ ಕಾನೂನು ಇದೆ ಎಂದು ಹೇಳಿದರು.
ಇದೇ ವೇಳೆ ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಯೊಬ್ಬರು ಸಾವನ್ನಪ್ಪಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಕುರಿತು ಶನಿವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆ ನಿಗದಿಯಾಗಿದೆ ಎಂದು ಹೇಳಿದರು.
ಬಳಿಕ ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ಕಳಪೆ ಗುಣಮಟ್ಟದ ಅಕ್ಕಿ ಅಥವಾ ಆಹಾರ ವಿತರಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ಎಚ್ಚರಿಕೆ ನೀಡಿದರು.
ರಾಜ್ಯದ ಅಂಗನವಾಡಿಗಳಿಗೆ 50 ವರ್ಷಗಳ ಇತಿಹಾಸವಿದ್ದು, 70,000 ಕೇಂದ್ರಗಳಲ್ಲಿ 35 ಲಕ್ಷ ಮಕ್ಕಳನ್ನು ನೋಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.