ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೆಗಾ ಹರಾಜು ಪ್ರಕ್ರಿಯೆ ಮತ್ತು ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಕುರಿತು ಫ್ರಾಂಚೈಸಿಗಳ ಮಾಲೀಕರಿಂದ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ.
ಬುಧವಾರ ಬಿಸಿಸಿಐ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಫ್ರಾಂಚೈಸಿ ಮಾಲೀಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಮುಂದಿನ ವರ್ಷ ನಡೆಯಲಿರುವ 18ನೇ ಐಪಿಎಲ್ ಆವೃತ್ತಿಯ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಕುರಿತು ಈಗ ಚರ್ಚೆ ಆರಂಭವಾಗಿದೆ.
‘ಬುಧವಾರ ಐಪಿಎಲ್ ಟೂರ್ನಿಯ 10 ಫ್ರಾಂಚೈಸಿಗಳ ಮಾಲೀಕರೊಂದಿಗೆ ಮಾತುಕತೆ ನಡೆಸಲಾಯಿತು.
ಮುಂಬರುವ ಆವೃತ್ತಿಗಳ ಕುರಿತು ವಿವಿಧ ವಿಷಯಗಳ ಕುರಿತ ಚರ್ಚೆ ನಡೆಯಿತು’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಆಟಗಾರರನ್ನು ಉಳಿಸಿಕೊಳ್ಳುವ ಕುರಿತು ಮತ್ತು ವಾಣಿಜ್ಯಕ ವಿಷಯಗಳ ಕುರಿತು ಮಾಲೀಕರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಉತ್ಪನ್ನಗಳ ಕೇಂದ್ರಿಕೃತ ಮಾರಾಟ ವ್ಯವಸ್ಥೆ, ಲೈಸೆನ್ಸಿಂಗ್ ಮತ್ತು ಗೇಮಿಂಗ್ ಕುರಿತು ಚರ್ಚಿಸಲಾಯಿತು’ ಎಂದೂ ಹೇಳಿದ್ದಾರೆ.