ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಮುಂಬರುವ ಆವೃತ್ತಿಯ ತಯಾರಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೀವ್ರಗೊಳಿಸಿದೆ. ಮುಂದಿನ ತಿಂಗಳು ಐಪಿಎಲ್ 2025ರ ಮೆಗಾ ಹರಾಜು ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಐಪಿಎಲ್ 2025ರ ಹರಾಜು ಪ್ರಕ್ರಿಯೆ ನಡೆಸುವ ಸ್ಥಳ ಮತ್ತು ದಿನಾಂಕದ ಬಗ್ಗೆ ಬಿಸಿಸಿಐ ಫ್ರಾಂಚೈಸಿ ಮಾಲೀಕರೊಂದಿಗೆ ನಿರಂತರವಾಗಿ ಚರ್ಚೆ ನಡೆಸುತ್ತಿದೆ.
ಬಿಸಿಸಿಐ ಮೆಗಾ ಹರಾಜನ್ನು ಆಯೋಜಿಸಲು ಸಾಧ್ಯವಿರುವ ಎಲ್ಲಾ ಆಯ್ಕೆಗಳನ್ನು ಪರಿಶೀಲನೆ ಮಾಡುತ್ತಿದೆ. ಸೌದಿ ಅರೇಬಿಯಾದ ಎರಡು ನಗರಗಳನ್ನು ಶಾರ್ಟ್ಲಿಸ್ಟ್ ಮಾಡಲಾಗಿದೆ. ಸ್ಥಳದ ಬಗ್ಗೆ ಶೀಘ್ರದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು.
ಯಾವ ಸ್ಥಳ?: ಮೂಲಗಳ ಪ್ರಕಾರ, ಬಿಸಿಸಿಐ ಸೌದಿ ಅರೇಬಿಯಾದ ಎರಡು ನಗರಗಳಾದ ರಿಯಾದ್ ಮತ್ತು ಜೆಡ್ಡಾವನ್ನು ಶಾರ್ಟ್ಲಿಸ್ಟ್ ಮಾಡಿದೆ. ಈ ಹಿಂದೆ ಆಸ್ಟ್ರಿಯಾದ ರಾಜಧಾನಿ ವಿಯೆನ್ನಾ ಹೊರತುಪಡಿಸಿ ಸಿಂಗಾಪುರ, ಲಂಡನ್ ಮತ್ತು ದುಬೈ ಹೆಸರುಗಳನ್ನು ಪರಿಗಣಿಸಲಾಗಿತ್ತು. ಬಿಸಿಸಿಐ ಈ ನಗರಗಳ ಬಗ್ಗೆ ಸಾಕಷ್ಟು ಯೋಚಿಸಿದೆ. ಆದರೆ ಈಗ ಸೌದಿ ಅರೇಬಿಯಾದ ಎರಡು ನಗರಗಳು ಅಂತಿಮವಾಗಿವೆ ಎಂದು ಹೇಳಲಾಗುತ್ತಿದೆ. ಹರಾಜು ಪ್ರಕ್ರಿಯೆಯನ್ನು ಆಯೋಜಿಸಲು ರಿಯಾದ್ ನಗರ ಮುಂಚೂಣಿಯಲ್ಲಿದ್ದು, ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳಲಿದೆ.
ಯಾವ ದಿನಾಂಕ: ನವೆಂಬರ್ ತಿಂಗಳಲ್ಲಿ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಇತ್ತೀಚೆಗಿನ ವರದಿಗಳು ಹೇಳುತ್ತಿವೆ. ಈಗ ಮೆಗಾ ಹರಾಜು ಪ್ರಕ್ರಿಯೆ ನಡೆಸುವ ದಿನಾಂಕ ಬೆಳಕಿಗೆ ಬಂದಿದೆ. ಐಪಿಎಲ್ ಮೆಗಾ ಹರಾಜನ್ನು ನವೆಂಬರ್ 25 ಮತ್ತು 26 ರಂದು ಆಯೋಜಿಸಬಹುದು. ಇದೇ ವೇಳೆ ಭಾರತ ಮತ್ತು ಆಸ್ಟ್ರೇಲಿಯಾ ಮೊದಲ ಟೆಸ್ಟ್ ನವೆಂಬರ್ 22-26 ನಡೆಯಲಿದೆ. ಹಾಗಾಗಿ ಐಪಿಎಲ್ ಮೆಗಾ ಹರಾಜಿನಲ್ಲಿ ಘರ್ಷಣೆಯಾಗುವ ಸಾಧ್ಯತೆಯಿರುವುದರಿಂದ ದಿನಾಂಕಗಳ ಬಗ್ಗೆ ಬಿಸಿಸಿಐ ಕೆಲವು ಆತಂಕಗಳನ್ನು ಹೊಂದಿತ್ತು. ಆದರೆ, ಇದಕ್ಕೆ ಬಿಸಿಸಿಐ ಪರಿಹಾರ ಕಂಡುಕೊಂಡಿದೆ ಎಂದು ಮೂಲಗಳು ತಿಳಿಸಿವೆ.