ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕು ಕುಸ್ತಿ ಸಂಘದಿಂದ ಬಯಲು ಬಸವಣ್ಣ ಕಡಲೇಕಾಯಿ ಪರಿಷೆ ಅಂಗವಾಗಿ ಒಂಬತ್ತು ಜಿಲ್ಲೆಗಳ ಅಂತರ ಜಿಲ್ಲಾ ಹೊನಲು ಬೆಳಕಿನ ಕುಸ್ತಿ ಪಂದ್ಯಾ- ವಳಿಗಳಿಗೆ ಬಸವಣ್ಣ ದೇವಾಲಯದ ಎದುರಿನ ಮೈದಾನದಲ್ಲಿ ಚಾಲನೆ ನೀಡಲಾಯಿತು.
ಸಾಂಪ್ರದಾಯಿಕ ಮಣ್ಣಿನ ಅಖಾಡ (ಮಟ್ಟಿ)ದಲ್ಲಿ ನಡೆದ ಕುಸ್ತಿ ಪಂದ್ಯಾವಳಿಗಳಲ್ಲಿ ಸೆಣಸಾಡುವ ಕುಸ್ತಿ ಪಟುಗಳ ಕಾದಾಟವನ್ನು ನೂರಾರು ಜನ ಕಣ್ಣುಂಬಿಕೊಂಡು ಸಂತಸ ಪಟ್ಟರು. ಕುಸ್ತಿ ಪಟುಗಳ ಜಂಗಿ ಕುಸ್ತಿಯಾಟ ಮೈನವಿರೇಳಿಸಿತು.ನಗರಸಭೆ ಉಪಾಧ್ಯಕ್ಷ ಎಂ.ಮಲ್ಲೇಶ್ ಮಾತನಾಡಿ, ನಮ್ಮ ಪಾರಂಪರಿಕ ಕ್ರೀಡೆಯಾದ ಕುಸ್ತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ದೊಡ್ಡಬಳ್ಳಾಪುರದ ಪಾತ್ರ ಹೆಚ್ಚಾಗಿದೆ.
ಆದರೆ ಇತ್ತೀಚೆಗೆ ಕುಸ್ತಿ ಪಂದ್ಯಾವಳಿಗಳ ಕೊರತೆಯುಂಟಾಗಿತ್ತು. ದೊಡ್ಡಬಳ್ಳಾಪುರ ತಾಲೂಕು ಕುಸ್ತಿ ಸಂಘದಿಂದ ನಡೆಯುತ್ತಿರುವ ಕುಸ್ತಿ ಪಂದ್ಯಾವಳಿಗಳು ಕುಸ್ತಿ ಪಟುಗಳಿಗೆ ಉತ್ತೇಜನ ನೀಡಲಿದೆ ಎಂದು ಹೇಳಿದರು.ಸಂಘದ ಗೌ.ಅಧ್ಯಕ್ಷ ಪೈಲ್ವಾನ್ ಚೌಡಪ್ಪ, ಕುಸ್ತಿ ಕಲೆಗೆ ಉತ್ತೇಜಿನ ನೀಡುವ ಸಲುವಾಗಿ ತಾಲೂಕಿನ ಗರುಡಿ ಮನೆಗಳ ಸಹಕಾರದೊಂದಿಗೆ ತಾಲೂಕು ಕುಸ್ತಿ ಸಂಘ ಸ್ಥಾಪಿಸಿ, ಪಂದ್ಯಾವಳಿ ಆಯೋಜಿಸಲಾಗಿದೆ. ಕ್ರೀಡಾಸಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕುಸ್ತಿ ಕಲೆ ನಮ್ಮ ತಲೆಮಾರಿಗೆ ಕೊನೆಯಾಗುವುದು ಬೇಡ. ಇಂದಿನ ಪೀಳಿಗೆಗೆ ಗರುಡಿ ಮನೆಗಳ ಪರಿಚಯ ವಾಗಬೇಕು ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್, ಉಪಾಧ್ಯಕ್ಷ ಎಂ.ಮಲ್ಲೇಶ್, ಪೌರಾಯುಕ್ತ ಕಾರ್ತಿಕ್ ಈಶ್ವರ್, ದೊಡ್ಡಬಳ್ಳಾಪುರ ತಾಲೂಕು ಕುಸ್ತಿ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ್, ಕಾರ್ಯೊದರ್ಶಿ ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿ ಗಣೇಶ್ ರಾಜಘಟ್ಟ, ಗೌರವ ಅಧ್ಯಕ್ಷ ಪಿಳ್ಳಣ್ಣ, ನಗರಸಭೆ ಸದಸ್ಯ ಎಸ್.ಪದ್ಮನಾಬ್, ಖಜಾಂಚಿ ವಿಶ್ವನಾಥ್ ಭಾಗವಹಿಸಿದ್ದರು.