ಚಾಮರಾಜನಗರ: ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿಯ ಆಹಾರ ವಿಜ್ಞಾನ ಮತ್ತು ಪೋಷಣೆ ಅಧ್ಯಯನ ವಿಭಾಗ ಹಾಗೂ ಮಾಳವೀಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರ ಸಹಯೋಗದಲ್ಲಿ ರಾಷ್ಟ್ರೀಯ ಉಚ್ಚತರ ಶಿಕ್ಷಾ ಅಭಿಯಾನ ಅನುದಾನದ ಅಡಿ ಇಂದಿನಿಂದ ಆಯೋಜಿಸಿರುವ ಎಸ್.ಪಿ.ಎಸ್.ಎಸ್. ಬಳಸಿ ಅನ್ವಯಿಕ ಬಯೋಸ್ಟಾಟಿಸ್ಟಿಕ್ಸ್ ಮತ್ತು ರಿಸರ್ಚ್ ಅನಾಲಿಟಿಕ್ಸ್ ಕುರಿತ ಎರಡು ದಿನಗಳ ಅಧ್ಯಾಪಕರ ಅಭಿವೃದ್ಧಿ ವಿಚಾರ ಸಂಕಿರಣ ಕಾರ್ಯಕ್ರಮವು ಮಾನಸಗಂಗೋತ್ರಿಯ ಆಹಾರ ವಿಜ್ಞಾನ ಮತ್ತು ಪೋಷಣೆ ಅಧ್ಯಯನ ವಿಭಾಗದಲ್ಲಿಂದು ಉದ್ಘಾಟನೆಗೊಂಡಿತು.
ಕಾರ್ಯಕ್ರಮ ಉದ್ಘಾಟಿಸಿದ ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ.ಆರ್. ಗಂಗಾಧರ್ ಅವರು ಮಾತನಾಡಿ ಇಂದಿನ ಶೈಕ್ಷಣಿಕ ಭೂ ದೃಶ್ಯದಲ್ಲಿ, ಸಂಶೋಧನಾ ವಿಶ್ಲೇಷಣೆಗಳು ಮತ್ತು ಸಂಖ್ಯಾಶಾಸ್ತ್ರದ ಉಪಕರಣಗಳು ಅನಿವಾರ್ಯವಾಗಿವೆ. ಅವು ಗುಣಮಟ್ಟದ ಸಂಶೋಧನೆ ಮತ್ತು ನಾವೀನ್ಯತೆಯ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತವೆ. ಸೈದ್ಧಾಂತಿಕ ಜ್ಞಾನ ಮತ್ತು ಪ್ರಾಯೋಗಿಕ ಅನ್ವಯದ ನಡುವಿನ ಅಂತರವನ್ನು ಕಡಿಮೆ ಮಾಡುತ್ತವೆ. ಅಲ್ಲದೆ, ದೇಶದ ಉಜ್ವಲ ಭವಿಷ್ಯಕ್ಕಾಗಿ ವಿದ್ಯಾರ್ಥಿ ಕೇಂದ್ರಿತ, ಕೌಶಲ್ಯ ಆಧಾರಿತ ಶಿಕ್ಷಣ ವ್ಯವಸ್ಥೆಯ ಪ್ರಾಮುಖ್ಯತೆಯ ಕುರಿತಾಗಿ ಒತ್ತು ನೀಡಲಿವೆ ಎಂದರು.
ಮುಂದುವರಿದು ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆಯಂತಹ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಪ್ರೊ. ಎಂ.ಆರ್. ಗಂಗಾಧರ್ ಅವರು ಫಲಾನುಭವಿಗಳಿಗೆ ಮಾಹಿತಿ ನೀಡಿ, ಇದು ದೇಶದ ಯುವಕರನ್ನು ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿನ ಯುವಕರನ್ನು ಸಬಲೀಕರಣಗೊಳಿಸಿ ಹಾಗೂ ಅವರ ಕೆಲಸದ ವಾತಾವರಣದಲ್ಲಿ ಹೆಚ್ಚು ಉದ್ಯೋಗ ಮತ್ತು ಉತ್ಪಾದಕತೆಯನ್ನು ಉಂಟುಮಾಡುತ್ತದೆ ಎಂದು ತಿಳಿಸಿದರು.
ಮಾಳವೀಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದ ನಿರ್ದೇಶಕರಾದ ಪ್ರೊ. ಎಸ್.ಎಸ್. ಮಾಲಿನಿ, ಅವರು ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಉಪಸ್ಥಿತರಿದ್ದರು. ವಿಭಾಗದ ಅಧ್ಯಕ್ಷರಾದ ಪ್ರೊ. ಎಂ. ಕೋಮಲ ಸಮಾರಂಭದ ಅಧ್ಯಕ್ಷತೆ ವಹಿಸಿ, ಅಂತರ ಶಿಸ್ತೀಯ ಸಹಕಾರವನ್ನು ಬೆಳೆಸುವಲ್ಲಿ ವಿಚಾರ ಸಂಕಿರಣದ ಮಹತ್ವವನ್ನು ದೃಢಪಡಿಸಿದರು.