ಬೆಂಗಳೂರು: ಮೈಸೂರಿನ ಪ್ರಮುಖ ರಸ್ತೆಯೊಂದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಡುವ ಮಹಾನಗರ ಪಾಲಿಕೆಯ ಪ್ರಸ್ತಾವನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ವಿಚಾರದಲ್ಲಿ ಸಿಎಂಗೆ ನೈತಿಕ ಹೊಣೆಗಾರಿಕೆಯಿಲ್ಲವೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಮೈಸೂರು ಸಾಮ್ರಾಜ್ಯವನ್ನು ರಾಜರು ಮತ್ತು ಆಢಳಿತಗಾರರು ಕಟ್ಟಿ ಬೆಳೆಸಿದರು. ಆದರೆ, ಮಹಾನ್ ರಾಜವಂಶದ ಹೆಸರನ್ನು ಹೊಂದಿರುವ ರಸ್ತೆಗೆ ತಮ್ಮ ಹೆಸರಿಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಸದ್ಯ ಚುನಾಯಿತ ಪ್ರತಿನಿಧಿಗಳಿಲ್ಲದ ಮೈಸೂರು ಮಹಾನಗರ ಪಾಲಿಕೆಯು ಇಂತಹ ಪ್ರಮುಖ ನಿರ್ಧಾರ ಕೈಗೊಳ್ಳುವುದು ಎಷ್ಟು ಸಮಂಜಸವಾಗಿದೆ ಎಂದರು.
ಮುಖ್ಯಮಂತ್ರಿ ಅಧಿಕಾರದಲ್ಲಿದ್ದುಕೊಂಡು ತಮ್ಮ ಹೆಸರಿಡಲು ಪ್ರಯತ್ನಿಸುತ್ತಿರುವ ಸಿದ್ದರಾಮಯ್ಯ ಅವರಿಗೆ ನೈತಿಕ ಹೊಣೆಗಾರಿಕೆ ಇಲ್ಲವೇ? ತುಘಲಕ್ ಆಡಳಿತವನ್ನು ನೆನಪಿಸುವ ಆಡಳಿತದಲ್ಲಿ ಮಾತ್ರ ಇಂತಹ ನಡವಳಿಕೆಗಳನ್ನು ಕಾಣಬಹುದು ಎಂದು ಟೀಕಿಸಿದರು.
ಕೆಆರ್ಎಸ್ ರಸ್ತೆಯ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನದಿಂದ ಮೇಟಗಳ್ಳಿ ರಾಯಲ್ ಜಂಕ್ಷನ್ವರೆಗಿನ ರಸ್ತೆಗೆ ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಎಂದು ನಾಮಕರಣ ಮಾಡುವ ಪ್ರಸ್ತಾವನೆಗೆ ಮೈಸೂರು ಮಹಾನಗರ ಪಾಲಿಕೆ ಇತ್ತೀಚೆಗೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಡಿ.13ರಂದು ಜಾಹೀರಾತು ಪ್ರಕಟವಾಗಿದ್ದು, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು 30 ದಿನಗಳೊಳಗೆ ಲಿಖಿತವಾಗಿ ಸಲ್ಲಿಸಲು ಕೇಳಲಾಗಿದೆ.
ಕಾಂಗ್ರೆಸ್ ಶಾಸಕ ಹರೀಶ್ ಗೌಡ ಅವರ ಸಲಹೆಯನ್ನು ಆಧರಿಸಿ, ಮೈಸೂರು ಮಹಾನಗರ ಪಾಲಿಕೆ (ಎಂಸಿಸಿ) ನವೆಂಬರ್ 22 ರಂದು ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ಆರೋಪಿಯಾಗಿದ್ದು, ಲೋಕಾಯುಕ್ತ ಪೊಲೀಸರಿಂದ ತನಿಖೆ ಎದುರಿಸುತ್ತಿದ್ದಾರೆ. ಹೀಗಿರುವಾಗ ಅವರ ಹೆಸರನ್ನು ಇಡುವುದಕ್ಕೆ ಪ್ರಸ್ತಾವನೆಗೆ ಆಕ್ಷೇಪಣೆಗಳು ಕೇಳಿಬಂದಿವೆ.