ಮೈಸೂರು: ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ನ ಆವರಣದಲ್ಲಿ ಡಿಸೆಂಬರ್ 31 ರಂದು ಚಿರತೆ ಕಾಣಿಸಿಕೊಂಡು ಸಂಸ್ಥೆಯ ಎಲ್ಲ ಸಿಬ್ಬಂದಿಯಲ್ಲಿ ಆತಂಕ ಹುಟ್ಟಿಸಿತ್ತು. ಚಿರತೆಯ ಓಡಾಟವನ್ನು ಸಿಸಿಟಿವಿಯಲ್ಲಿ ಕಂಡ ಸಿಬ್ಬಂದಿ ಹೌಹಾರಿದ್ದರು. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಚಿರತೆ ಹೋದಡೆಯೆಲ್ಲಾ ಹುಡುಕಾಟ ನಡೆಸಿದ್ದರು. ಆದರೆ, 16 ದಿನಗಳಿಂದ ಹುಡುಕಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ.
ಮೈಸೂರಿನಲ್ಲಿ ಇನ್ಫೋಸಿಸ್ ಕ್ಯಾಂಪಸ್ ಆವರಣ ಸುಮಾರು 300 ಎಕರೆಯಷ್ಟಿದೆ. ಇನ್ಫೋಸಿಸ್ನಲ್ಲಿ ಕೇವಲ ಕಟ್ಟಡಗಳು ಮಾತ್ರವಲ್ಲ ಖಾಲಿ ಪ್ರದೇಶ, ನೀರಿನ ಹೊಂಡಗಳು ಸಹ ಇವೆ. ಹೀಗಾಗಿ, ಇಲ್ಲಿ ಚಿರತೆ ಹುಡುಕುವುದು ಅಷ್ಟು ಸುಲಭವಾಗಿರಲಿಲ್ಲ. ಅದಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಬರೋಬ್ಬರಿ 70 ಜನರ ತಂಡ ರಚಿಸಿದ್ದರು. ಇನ್ಫೋಸಿಸ್ನ ಪ್ರತಿ ಮೂಲೆ ಮೂಲೆಯಲ್ಲೂ ಚಿರತೆಗಾಗಿ ಹುಡುಕಾಟ ನಡೆಸಿತ್ತು. ಟ್ರಾಪ್ ಕ್ಯಾಮೆರಾ, ಡ್ರೋನ್ ಕ್ಯಾಮೆರಾ ಇನ್ಫೋಸಿಸ್ಆವರಣದ ಸಿಸಿ ಕ್ಯಾಮರಾ ಸೇರಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಚಿರತೆ ಸೆರೆಗೆ ತಂಡ ಮುಂದಾಗಿತ್ತು. ಚಿರತೆಯ ಹೆಜ್ಜೆ ಗುರುತುಗಳು ಸಹ ಅರಣ್ಯ ಇಲಾಖೆಯವರಿಗೆ ಸಿಕ್ಕಿಲ್ಲ. ಹೀಗಾಗಿ, ಚಿರತೆ ಪತ್ತೆ ಕಾರ್ಯಚರಣೆ ಸ್ಥಗಿತಗೊಳಿಸಿದ್ದಾರೆ ಎಂದು ಡಿಸಿಎಫ್ ಡಾ. ಬಸವರಾಜ್ ತಿಳಿಸಿದ್ದಾರೆ.
ಸದ್ಯ ಇನ್ಫೋಸಿಸ್ ಆವರಣದಲ್ಲಿ ಚಿರತೆ ಪತ್ತೆ ಕಾರ್ಯಾಚರಣೆ ಕೈಬಿಡಲಾಗಿದ್ದು, ರಾತ್ರಿ ನಿಗಾ ಇರಲಿದೆ. ಜತೆಗೆ ಕ್ಯಾಮರಾ ಮೂಲಕ ಕಾರ್ಯಾಚರಣೆ ಹಾಗೂ ಸಿಬ್ಬಂದಿ ಗಸ್ತು ಮುಂದುವರಿಯಲಿದೆ. ಸದ್ಯ ಇನ್ಫೋಸಿಸ್ ಸಿಬ್ಬಂದಿ ವರ್ಕ್ ಫ್ರಮ್ ಹೋಮ್ನಲ್ಲಿದ್ದು, ಚಿರತೆ ಸಿಗದಿದ್ದರೆ ಮುಂದೇನು ಎಂಬ ಆತಂಕ ಕಾಡುತ್ತಿದೆ.
ಚಿರತೆ ಕಾಟದ ಆತಂಕದ ಕಾರಣ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್ ಆಯ್ಕೆ ಮುಂದುವರಿಸಲಾಗಿದೆ. ಇದು ಎಷ್ಟು ದಿನಗಳ ವರೆಗೆ ಮುಂದುವರಿಯಲಿದೆ ಎಂಬುದನ್ನು ಕಾದುನೋಡಬೇಕಿದೆ. ಸದ್ಯಕ್ಕೆ ಅರಣ್ಯ ಇಲಾಖೆ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರೂ ಕಣ್ಗಾವಲು ಮುಂದುವರಿದಿದೆ. ಹೀಗಾಗಿ ಗಸ್ತು ಸಿಬ್ಬಂದಿಗೆ ಅಥವಾ ಸಿಸಿಟಿವಿ, ಡ್ರೋನ್ ಕ್ಯಾಮರಾದಲ್ಲಿ ಒಂದು ವೇಳೆ ಚಿರತೆ ಪತ್ತೆಯಾದರೆ ಮತ್ತೆ ಕಾರ್ಯಾಚರಣೆ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಸದ್ಯದ ಮಟ್ಟಿಗೆ ವರ್ಕ್ ಫ್ರಂ ಹೋಮ್ ಮುಂದುವರಿಯಲಿದೆ ಎನ್ನಲಾಗಿದೆ.
ಮೈಸೂರಿನ ಇನ್ಫೋಸಿಸ್ನಲ್ಲಿ ಚಿರತೆ ಕಾರ್ಯ ಪಡೆ, ಆನೆ ಕಾರ್ಯ ಪಡೆ, 70 ಇನ್ಫೋಸಿಸ್ ಸಿಬ್ಬಂದಿ ಸೇರಿ 12 ಜಂಟಿ ತಂಡಗಳಿಂದ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ, ಚಿರತೆ ಮಾತ್ರ ಪತ್ತೆಯಾಗಿಲ್ಲ.