ಬೆಂಗಳೂರು: ಜಯಮಹಲ್ ರಸ್ತೆ ಮತ್ತು ಬಳ್ಳಾರಿ ರಸ್ತೆಗೆ ಹೊಂದಿಕೊಂಡಿರುವ 15 ಎಕರೆ 39 ಗುಂಟಾ ಭೂಮಿ ಸ್ವಾಧೀನ ಪ್ರಕ್ರಿಯೆಗಾಗಿ ಮೈಸೂರು ಮಹಾರಾಜರ ವಾರಸುದಾರರಿಗೆ ರಾಜ್ಯ ಸರ್ಕಾರ 6 ವಾರಗಳಲ್ಲಿ 3,000 ಕೋಟಿ ರೂಪಾಯಿ ಪರಿಹಾರ ನೀಡಬೇಕಿದೆ.
ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್) ಪ್ರಮಾಣಪತ್ರದ ರೂಪದಲ್ಲಿ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ. ಈ ತೀರ್ಪು, ಸರ್ಕಾರ ತೆಗೆದುಕೊಂಡಿದ್ದ ಇತ್ತೀಚಿನ ನಿಲುವಿಗೆ ವಿರುದ್ಧವಾಗಿದೆ.
ನ್ಯಾಯಾಲಯದ ಆದೇಶದ ಪ್ರಕಾರ, ಬಳ್ಳಾರಿ ರಸ್ತೆಗೆ ಹೊಂದಿಕೊಂಡಂತೆ ಇರುವ ಬೆಂಗಳೂರು ಅರಮನೆ ಭೂಮಿಗೆ ಬಿಬಿಎಂಪಿ ಪ್ರತಿ ಚದರ ಅಡಿಗೆ 2,83,500 ರೂಪಾಯಿ, ಜಯಮಹಲ್ ರಸ್ತೆಯಲ್ಲಿರುವ ಭೂಮಿಗೆ ಪ್ರತಿ ಚದರ ಅಡಿಗೆ 2,04,000 ರೂಪಾಯಿ ಮಾರ್ಗಸೂಚಿ ಮೌಲ್ಯವನ್ನು ನಿಗದಿಪಡಿಸಬೇಕಾಗುತ್ತದೆ. ಇದು ಪ್ರತಿ ಎಕರೆಗೆ 194 ಕೋಟಿ ರೂಪಾಯಿಯಾಗಲಿದ್ದು, ಒಟ್ಟು ಭೂಸ್ವಾಧೀನ ಪ್ರಕ್ರಿಯೆಗೆ ಒಟ್ಟು 3000 ಕೋಟಿ ರೂಪಾಯಿ ಪರಿಹಾರ ನೀಡಬೇಕಾಗುತ್ತದೆ.
ಸುಮಾರು 3 ಲಕ್ಷ ಚದರ ಮೀಟರ್ನ ಹೆಚ್ಚುವರಿ ನಿರ್ಮಾಣ ಪ್ರದೇಶವನ್ನು ನಿರ್ಮಿಸಲು 3,000 ಕೋಟಿ ರೂಪಾಯಿ ಮೌಲ್ಯದ TDR ಪ್ರಮಾಣಪತ್ರಗಳನ್ನು ಬಿಲ್ಡರ್ಗಳು ಲೋಡ್ ಮಾಡಬಹುದಾಗಿದ್ದು, ಈ ಪ್ರದೇಶದಲ್ಲಿ ಬಹುಮಹಡಿ ಕಟ್ಟಡಗಳು ತಲೆ ಎತ್ತಲಿವೆ.
ಏಪ್ರಿಲ್ 2024 ರಲ್ಲಿ, ರಾಜ್ಯ ಸರ್ಕಾರ ಬೆಂಗಳೂರು ಅರಮನೆ (ಸ್ವಾಧೀನ ಮತ್ತು ವರ್ಗಾವಣೆ) ಕಾಯಿದೆ 1996 ರ ಪ್ರಕಾರ ಪ್ರತಿ ಚದರ ಮೀಟರ್ಗೆ ರೂ 120.68 ರಂತೆ ಅರಮನೆಯ ಭೂಮಿಯ ಮೌಲ್ಯವನ್ನು ನಿರ್ಧಾರ ಮಾಡಿತ್ತು. ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪಿನಲ್ಲಿ, ಮಾರುಕಟ್ಟೆ ಮೌಲ್ಯವನ್ನು ನಿಗದಿಪಡಿಸಲು ಪಕ್ಕದ ಪ್ರದೇಶಗಳಲ್ಲಿ ಚಾಲ್ತಿಯಲ್ಲಿರುವ ಮಾರ್ಗದರ್ಶಿ ಮೌಲ್ಯವನ್ನು ಗಣನೆಗೆ ತೆಗೆದುಕೊಂಡಿದೆ ಇದು ಸರ್ಕಾರದ ಅಂದಾಜುಗಿಂತ ಸರಿಸುಮಾರು 2,00,000 ಪಟ್ಟು ಹೆಚ್ಚಾಗಿದೆ.