ಬೆಂಗಳೂರು: ಮೊಬೈಲ್ ಚಾರ್ಜರ್ ಬಳಸುವಾಗ ಎಲೆಕ್ಟ್ರಿಕ್ ಶಾಕ್ ಹೊಡೆದು ವಿದ್ಯಾರ್ಥಿ ಯೊಬ್ಬ ಸಾವಿಗೀಡಾಗಿದ ದುರ್ಘಟನೆ ಮಂಜುನಾಥ್ನಗರದಲ್ಲಿ ನಡೆದಿದೆ.ಪಿಜಿಯಲ್ಲಿ ವಾಸವಿದ್ದ ಬೀದರ್ ಮೂಲದ ಶ್ರೀನಿವಾಸ್ (24) ಸಾವನ್ನಪ್ಪಿದ ವಿದ್ಯಾರ್ಥಿಯಾಗಿದ್ದು, ಬೀದರ್ನಿಂದ ಬೆಂಗಳೂರಿಗೆ ಬಂದು ಸಾಫ್ಟ್ವೇರ್ ಕೋರ್ಸ್ ಮಾಡುತ್ತಿದ್ದರು. ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಪಿಜಿಯಲ್ಲಿ ಶ್ರೀನಿವಾಸ್ ಇದ್ದ ರೂಮ್ನಲ್ಲೇ ಘಟನೆ ನಡೆದಿದೆ.
ಮೊಬೈಲ್ ಚಾರ್ಜ್ ಹಾಕಲು ಹೋದಾಗ ಎಲೆಕ್ಟ್ರಿಕ್ ಶಾಕ್ ಹೊಡೆದಿದ್ದು, ಚಾರ್ಜಿಂಗ್ ವೈರ್ ಅಥವಾ ಸ್ವಿಚ್ ಬೋರ್ಡ್ನಿಂದ ವಿದ್ಯುತ್ ತಗುಲಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.ಅವರು ಬಳಸುತ್ತಿದ್ದ ಮೊಬೈಲ್ ಚಾರ್ಜರ್ ವೈರ್ ಕೂಡ ಸ್ವಲ್ಪ ಡ್ಯಾಮೇಜ್ ಆಗಿತ್ತು ಎನ್ನಲಾಗಿದೆ. ಕರೆಂಟ್ ಶಾಕ್ ತಗುಲಿ ಅಂಗಾತ ಬಿದ್ದಿದ್ದ ಶ್ರೀನಿವಾಸ್ರನ್ನು, ಈ ವೇಳೆ ಊಟಕ್ಕೆ ಬಾ ಎಂದು ಕರೆಯಲು ಬಂದ ಪಕ್ಕದ ಬೆಡ್ ಹುಡುಗ ಕಂಡು ಮೈಮುಟ್ಟಿ ಕರೆಯಲು ಮುಂದಾಗಿದ್ದಾನೆ.
ಈ ವೇಳೆ ಆತನಿಗೂ ಶ್ರೀನಿವಾಸ್ ಮೈಯಿಂದ ಕರೆಂಟ್ ಶಾಕ್ ತಗುಲಿದೆ. ಆದರೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಪಿಜಿ ಸಿಬ್ಬಂದಿ ತಕ್ಷಣ ಬಸವೇಶ್ವರ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಮೃತದೇಹವನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ. ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.