ಬೆಂಗಳೂರು: ಮೊಬೈಲ್ ತಯಾರಿಕ ಕಂಪೆನಿಯ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ರಾಜ್ಯದ ಗಡಿಭಾಗವಾದ ತಮಿಳುನಾಡಿನ ಹೊಸೂರು ಸಮೀಪ ಸಂಭವಿಸಿದೆ.
ಹೊಸೂರಿನ ಕೂತನಹಳ್ಳಿಯಲ್ಲಿರುವ ಟಾಟಾ ಕಂಪೆನಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಹೊರಬರುತ್ತಿದೆ. ಇದರಿಂದಾಗಿ ಅಪಾರ ಮೌಲ್ಯದ ವಸ್ತುಗಳು ನಾಶವಾಗಿವೆ ಎಂದು ಹೇಳಲಾಗಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರ್ಖಾನೆಯಲ್ಲಿದ್ದ ಕಾರ್ಮಿಕರು ಓಡೋಡಿ ಹೊರ ಬಂದ ಪರಿಣಾಮ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಹೇಳಲಾಗಿದೆ.