ಬೆಂಗಳೂರು: ಸ್ತ್ರೀ ರೋಗ,ಬಂಜೆತನ ಆರೈಕೆಯಲ್ಲಿ ಹೆಸರು ಮಾಡಿರುವ ಡಾ.ಕಾಮಿನಿ ಎ.ರಾವ್ ಆಸ್ಪತ್ರೆ ಬೆಂಗಳೂರಿನ ಯಾವುದಾದರೂ ಸರ್ಕಾರಿ ಆಸ್ಪತ್ರೆಯಲ್ಲಿ ಡಾ.ಕಾಮಿನಿರಾವ್ ಹೆಸರಿನಲ್ಲಿ ಐವಿಎಫ್ ಕೇಂದ್ರ ಪ್ರಾರಂಭಿಸಲು ಅವಕಾಶ ನೀಡಬೇಕೆಂದು ಆಸ್ಪತ್ರೆಯ ಸಂಸ್ಥಾಪಕಿ, ವ್ಯವಸ್ಥಾಪಕ ನಿರ್ದೇಶಕಿ ಪೂಜಾ ಸಿದ್ದಾರ್ಥ್ ರಾವ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಮಾಡಿದೆ.
ಬೆಂಗಳೂರಿನ ಶಿವಾನಂದ ವೃತ್ತದಲ್ಲಿರುವ ಪ್ರೊ .ಡಾ.ಕಾಮಿನಿರಾವ್ ಸ್ತ್ರೀ ರೋಗ, ಬಂಜೆತನ ನಿವಾರಣಾ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು,ಎಲ್ಲ ಬಡ ಹೆಂಗಸರು ಮತ್ತು ಶ್ರೀಮಂತರು ತೆಗೆದುಕೊಳ್ಳುವ ಉನ್ನತ ಮಟ್ಟದ ಆರೋಗ್ಯ ಸೇವೆಯನ್ನು ನೀಡುವ ಉದ್ದೇಶದಿಂದ,ಬಿಪಿಎಲ್ ಕಾರ್ಡ್ ಹೊಂದಿರುವ ಸ್ತ್ರೀರೋಗಿಗಳಿಗೆ ಉತ್ತಮ ಆರೈಕೆ ನೀಡುವ ಉದ್ದೇಶದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಡಾ.ಕಾಮಿನಿರಾವ್ ಹೆಸರಿನಲ್ಲಿ ಆರೈಕೆ ಕೇಂದ್ರ ತೆರೆಯುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಬೆಂಗಳೂರಿನ ಜಯನಗರ ಮತ್ತು ಶೇಷಾದ್ರಿಪುರಂನ ಶಿವಾನಂದ ಸರ್ಕಲ್ ನಲ್ಲಿ ಆಸ್ಪತ್ರೆ ತೆರೆಯಲಾಗಿದ್ದು,ನಗರದ ವಿವಿಧ ಭಾಗಗಳಲ್ಲಿ ಕೈ ಗೆಟುಕುವ ದರದಲ್ಲಿ ಸ್ತ್ರೀ ರೋಗ, ಬಂಜೆತನ, ಹೆರಿಗೆ ಚಿಕಿತ್ಸೆಯನ್ನು ನೀಡುವ ಉದ್ದೇಶದಿಂದ ಡಾ.ಕಾಮಿನಿರಾವ್ ಆಸ್ಪತ್ರೆಯನ್ನು ಪ್ರಾರಂಭಿಸಲಾಗುವುದು ಎಂದು ಡಾ.ಕಾಮಿನಿರಾವ್ ಸೊಸೆ ವೈದ್ಯೆ ಪೂಜಾ ಸಿದ್ಧಾರ್ಥ್ ರಾವ್ ತಿಳಿಸಿದರು.
ಡಾ.ಕಾಮಿನಿರಾವ್ ಮಾತನಾಡಿ, ಗರ್ಬಿಣಿ ಸ್ತ್ರೀಯರ ಹೆರಿಗೆ ಮತ್ತು ಆರೈಕೆಯಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಿದೆ, ಮೆಡ್ ಲೈನ್ ಆಕಾಡೆಮಿಕ್ಸ್ ಮೂಲಕ ತರಬೇತಿ ಹೊಂದಿದ ವೈದ್ಯರನ್ನು ಹೊಂದಿದ್ದು,ವಿಶೇಷವಾಗಿ ಬಿಪಿಎಲ್ ಕಾರ್ಡ್ ಹೊಂದಿರುವ ಸ್ತ್ರೀಯರಿಗೆ ರಿಯಾಯಿತಿ ದರದಲ್ಲಿ ಹೆರಿಗೆಯನ್ನು ಮಾಡಿಸಲಾಗುವುದು,ಮೆನಾರ್ಕ್ ನಿಂದ ಮೆನೋಪಾಸ್ ವರೆಗೆ ಅದಕ್ಕಿಂತ ಮುಂದೆ ಮಹಿಳಾ ಆರೋಗ್ಯ ಸೇವೆಯನ್ನು ನೀಡಲಾಗುವುದು ಎಂದು ತಿಳಿಸಿದರು.
ತ್ವರಿತ ಹೆರಿಗೆ ಚಿಕಿತ್ಸಾ ವಿಧಾನ ಅಪಾಯಕಾರಿ ಯಾಗಿದ್ದು, ಗರ್ಭಿಣಿ ಸ್ತ್ರೀಯರಿಗೆ ಸಹಜ ಹೆರಿಗೆ ಮಾಡಿಸುವುದು ಅಗತ್ಯವಾಗಿದೆ,ಎಲ್ಲ ಆಸ್ಪತ್ರೆಗಳು ತ್ವರಿತ ಹೆರಿಗೆ (ಸೀಜರಿನ್)ವಿಧಾನವನ್ನು ಆರ್ಥಿಕ ದೃಷ್ಟಿಯಿಂದ ಅನುಸರಿಸುತ್ತವೆ ಎಂ ಬುದು ತಪ್ಪು ಅಭಿಪ್ರಾಯವಾಗಿದೆ, ಕೆಲವರು ಮಾಡಬಹುದು,ಗರ್ಭದಲ್ಲಿರುವ ಮಗು ಅಪಾಯಕಾರಿ ಸ್ಥಿತಿಯಲ್ಲಿದೆ ಎಂಬುದು ವೈದ್ಯರಿಗೆ ಮನವರಿಕೆಯಾದಗ ಈ ಹೆರಿಗೆ ವಿಧಾನ ಅನುಸರಿಸುವುದು ಸಹಜವಾಗಿದೆ ಎಂದರು.
ಬಂಜೆತನ ವಿಚಾರದಲ್ಲಿ ಕೇವಲ ಮಹಿಳೆಯನ್ನು ದೂಷಿಸುವುದು ಸರಿಯಲ್ಲ,ಇದರಲ್ಲಿ ಪುರುಷರ ಪಾತ್ರವೂ ಇರುತ್ತದೆ.ಕೆಲ ಪುರುಷರಿಗೂ ದೈಹಿಕವಾಗಿ ಬಂಜೆತನವಿರುತ್ತದೆ ಎಂದು ತಿಳಿಸಿದ ಅವರು, ಹೆಣ್ಣು ಮಕ್ಕಳು ಹೆಚ್ಚು ಮೊಬೈಲ್ ಬಳಸುವುದು, ಲ್ಯಾಪ್ ಟ್ಯಾಪ್ ತಮ್ಮ ತೊಡೆಯ ಮೇಲೆ ಇಟ್ಟುಕೊಂಡು ಕೆಲಸ ಮಾಡುವುದರಿಂದ ಬಂಜೆತನ ಉಂಟಾಗಬಹುದು ಎಂದು ಹೇಳಿದರು.