ಪ್ರಯಾಗ್ರಾಜ್: 144 ವರ್ಷಗಳಿಗೊಮ್ಮೆ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದು ಪುಣ್ಯ ಸ್ನಾನ ಮಾಡಿದ್ದಾರೆ.ಬೆಳಗ್ಗೆ 11:30 ಗಂಟೆ ಸುಮಾರಿಗೆ ಬೋಟ್ ಮೂಲಕ ಪ್ರಯಾಗ್ರಾಜ್ನ ತ್ರಿವೇಣಿ ಸಂಗಮ್ಘಾಟ್ಗೆ ತೆರಳಿದ ಮೋದಿ ಕೊರಳಲ್ಲಿ ರುದ್ರಾಕ್ಷಿ ಮಾಲೆ, ಕೇಸರಿ ಹಾಗೂ ಕಡುನೀಲಿ ವಸ್ತ್ರ ಧರಿಸಿ ಪುಣ್ಯಸ್ನಾನ ಮಾಡಿದ್ದಾರೆ. ಇದೇ ವೇಳೆ ರುದ್ರಾಕ್ಷಿ ಮಾಲೆಯನ್ನು ಹಿಡಿದು ಸೂರ್ಯದೇವ ಹಾಗೂ ಗಂಗಾ ಮಾತೆಗೆ ಆರತಿ ಬೆಳಗಿ ನಮಿಸಿದ್ದಾರೆ.
ಹಿಂದೂಗಳಿಗೆ ಪವಿತ್ರ ದಿನ ಎಂದೇ ಹೇಳಲಾಗುವ ರಥ ಸಪ್ತಮಿಯ ದಿನದಂದು ಪ್ರಧಾನಿಗಳು ಪುಣ್ಯಸ್ನಾನ ಮಾಡಿದ್ದಾರೆ. ಇದಾದ ಬಳಿಕ ಇಲ್ಲಿನ ಸಂತರೊಂದಿಗೆ ಚರ್ಚಿಸಲಿರುವ ಮೋದಿ 12 ಗಂಟೆ ಸುಮಾರಿಗೆ ದೆಹಲಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಬೆಳಿಗ್ಗೆ 10.30ರ ಸುಮಾರಿಗೆ ಪ್ರಯಾಗ್ರಾಜ್ಗೆ ಆಗಮಿಸಿದ ಪ್ರಧಾನಿ ಮೋದಿಯವರನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವಾಗತಿಸಿದರು. ನಂತರ ಅರೈಲ್ ಘಾಟ್ಗೆ ಆಗಮಿಸಿದ ಅವರು ಅಲ್ಲಿಂದ ಬೋಟ್ ಮುಖಾಂತರ ಯೋಗಿ ಆದಿತ್ಯನಾಥ್ ಅವರೊಂದಿಗೆ ಸಂಗಮ್ ಘಾಟ್ಗೆ ತೆರಳಿದರು. ಅವರು ಅಲ್ಲಿ ಗಂಗೆಯಲ್ಲಿ ಪುಣ್ಯಸ್ನಾನ ಮಾಡಿ ಪೂಜೆ ಪುನಸ್ಕಾರ ನೆರವೇರಿಸಿದರು.
ಈ ಸಂದರ್ಭದಲ್ಲಿ ಪುರೋಹಿತರುಗಳು ಮಂತ್ರ ಪಠಣ ಮಾಡಿ ಪೂಜೆ ವಿಧಿವಿಧಾನಗಳನ್ನು ಮೋದಿಯವರಿಂದ ನೆರವೇರಿಸಿದರು.ಇಂದು ರಥಸಪ್ತಮಿಯ ದಿನವಾಗಿದೆ. ರಥ ಸಪ್ತಮಿ ಹಬ್ಬವನ್ನು ರೈತರಿಗೆ ಸುಗ್ಗಿಯ ಆರಂಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ದಿನದಿಂದಲೇ ಬೇಸಿಗೆಯೂ ಪ್ರಾರಂಭವಾಗುತ್ತದೆ. ಈ ದಿನವನ್ನು ದಾನ- ಧರ್ಮ ಮಾಡುವುದಕ್ಕೆ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಈ ದಿನದಂದು ದಾನ ಮಾಡುವುದರಿಂದ ಹಿಂದೆ ಮಾಡಿದ ಎಲ್ಲಾ ಪಾಪಗಳು ಮತ್ತು ರೋಗಗಳಿಂದ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ. ಈ ದಿನ ಸೂರ್ಯೋದಯಕ್ಕೆ ಮೊದಲು ಸ್ನಾನ ಮಾಡುವ ಸಂಪ್ರದಾಯವಿದೆ.
ಈ ದಿನದಂದು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ದೇಹದ ಎಲ್ಲಾ ರೋಗಗಳು, ವಿಶೇಷವಾಗಿ ಚರ್ಮಕ್ಕೆ ಸಂಬಂಧಿಸಿದಂತಹ ರೋಗಗಳು ಗುಣವಾಗುತ್ತವೆ ಎಂದು ಹೇಳಲಾಗುತ್ತದೆ. ಇದಕ್ಕಾಗಿಯೇ ರಥ ಸಪ್ತಮಿಯನ್ನು ಆರೋಗ್ಯ ಸಪ್ತಮಿ ಎಂದೂ ಕರೆಯುತ್ತಾರೆ. ಹಾಗಾಗಿಯದೇ ಮೋದಿ ದೇಶಕ್ಕೆ ಒಳಿತಾಗಲಿ ಎನ್ನುವ ಉದ್ದೇಶದಿಂದ ಪುಣ್ಯಸ್ನಾನ ಮಾಡಿದ್ದಾರೆ ಎಂದು ಜೋತಿಷಿಗಳು ಹೇಳುತ್ತಾರೆ.