ವಿಜಯಪುರ: ವಕ್ಫ್ ಕಾಯ್ದೆಯನ್ನು ಹಿಂದೂ ವಿರೋಧಿ ಮತ್ತು ಸಂವಿಧಾನ ವಿರೋಧಿ ಎಂದು ಟೀಕಿಸುವ ಬಿಜೆಪಿ ನಾಯಕರು, ಕೇಂದ್ರದಲ್ಲಿ 11 ವರ್ಷಗಳಿಂದ ಅಧಿಕಾರದಲ್ಲಿದ್ದರೂ ವಕ್ಫ್ ಕಾಯ್ದೆಯನ್ನೇಕೆ ರದ್ದು ಮಾಡಲಿಲ್ಲ ಎಂದು ಸಚಿವ ಎಂಬಿ.ಪಾಟೀಲ್ ಅವರು ಶುಕ್ರವಾರ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಾವಧಿಯಲ್ಲಿ ವಕ್ಫ್ ಆಸ್ತಿ ರಕ್ಷಣೆಗೆ ಹೊರಡಿಸಿದ ಹತ್ತಾರು ಸುತ್ತೋಲೆಗಳನ್ನು ಬಿಡುಗಡೆ ಮಾಡಿದರು
ಕಳೆದ ಒಂದೆರಡು ವಾರಗಳಿಂದ ವಕ್ಫ್ ಆಸ್ತಿ ವಿಚಾರದಲ್ಲಿ ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಆದರೆ, ತಾವೇ ಅಧಿಕಾರದಲ್ಲಿ ಇದ್ದಾಗ ರೈತರು, ಧಾರ್ಮಿಕ ಸ್ಥಳಗಳ ಹಾಗೂ ಎಲ್ಲ ಧರ್ಮೀಯರ ಆಸ್ತಿಯನ್ನು ವಕ್ಫ್ ಗೆ ಹಿಂಪಡೆದಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ 2019ರಲ್ಲಿ ಬಿಜೆಪಿಯೇ ಅಧಿಕಾರದಲ್ಲಿತ್ತು. ಆ ವರ್ಷದ ಸೆ.17ರಂದು ದೇವರಹಿಪ್ಪರಗಿ ತಾಲೂಕಿನ ಮಣೂರ ಗ್ರಾಮದ ಮುರುಘೇಂದ್ರ ಶಿವಬಸಪ್ಪ ಖ್ಯಾಡಿ, ಮಾಶಾಬಿ ಮೌಲಾಸಾಬ ಮುಲ್ಲಾ, ಸುಭಾಷ ಧರ್ಮಣ್ಣ ಆನೆಗುಂದಿ ಅವರ ಆಸ್ತಿಗಳನ್ನು ವಕ್ಫ್ ಹೆಸರಿಗೆ ಇಂದೀಕರಣ ಮಾಡಿದೆ. ಇಂಡಿ ತಾ.ನಲ್ಲೂ 2023ರ ಜ.13ರಂದು ಮಾರ್ಸನಹಳ್ಳಿಯ ಗ್ರಾಮದ ನಿಂಗಪ್ಪ ಭೂಮಣ್ಣ ಶಿರಶ್ಯಾಡ ಅವರಿಗೆ ಸೇರಿದ ಆಸ್ತಿಯನ್ನು ಇದೇ ರೀತಿ ವಕ್ಫ್ ಹೆಸರಿಗೆ ಮಾಡಲಾಗಿದೆ.
2010ರ ಜ.4ರಂದು ಬಿಜೆಪಿ ಸರಕಾರವಿದ್ದಾಗ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಕ್ರಮಗೊಳಿಸಬೇಕೆಂದು ಕಂದಾಯ ಇಲಾಖೆ ಮೂಲಕ ಸುತ್ತೋಲೆ ಹೊರಡಿಸಲಾಗಿತ್ತು. ಬಳಿಕ ಅದೇ ವರ್ಷದ ಮೇ 29ರಂದು ವಕ್ಫ್ ಆಸ್ತಿಗಳ ಅತಿಕ್ರಮಣ ತೆರವಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದರು. ಇದಾದಮೇಲೂ 2011ರಲ್ಲಿ ಒಮ್ಮೆ ಕಲಬುರಗಿಯ ಪ್ರಾದೇಶಿಕ ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ದಾಖಲೆಗಳನ್ನು ಕ್ರಮಬದ್ಧಗೊಳಿಸುವ ಕುರಿತು, 2011ರ ಏ.23 ರಂದು ವಕ್ಫ್ ಭೂಸ್ವಾಧೀನ ಪರಿಹಾರವನ್ನು ವಕ್ಫ್ ಮಂಡಳಿಯ ಲೆಕ್ಕ ಶೀರ್ಷಿಕೆಗೆ ಕಡ್ಡಾಯವಾಗಿ ಪಾವತಿಸಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದರು.
ಬಿಜೆಪಿ ತನ್ನ ಎರಡನೆಯ ಅವಧಿಯ ಸರಕಾರ ಇದ್ದಾಗಲೂ ಹೀಗೆಯೇ ಮಾಡಿದೆ. 2020ರ ಆ.8 ರಂದು ವಕ್ಫ್ ಆಸ್ತಿಗಳನ್ನು ಭೂಮಿ ತಂತ್ರಾಶದಲ್ಲಿ ಫ್ಲಾಗ್ ಮಾಡುವ ಕುರಿತು ಕಂದಾಯ ಇಲಾಖೆಯ ಅಂದಿನ ಉಪ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದರು. ಪುನಃ 2021ರ ಜ.8 ರಂದು ಜಿಲ್ಲಾ ಮಟ್ಟದ ವಕ್ಫ್ ಆಸ್ತಿಗಳ ಕಾರ್ಯಪಡೆ ರಚಿಸಲು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಂದ ಸುತ್ತೋಲೆ ಹೊರಡಿಸಿತ್ತು. ನಂತರ ಕೂಡ 2021ರ ಜ.27ರಂದು ಗ್ರಾಮ ಠಾಣಾ ವ್ಯಾಪ್ತಿಯಲ್ಲಿರುವ ವಕ್ಸ್ ಆಸ್ತಿಗಳನ್ನು ಪಂಚತಂತ್ರ ಮತ್ತು ಇ-ಸ್ವತ್ತು ತಂತ್ರಾಂಶದಲ್ಲಿ ಫ್ಲಾಗ್ (ಲಾಕ್) ಮಾಡುವ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ದೇಶಕರ ಸುತ್ತೋಲೆ ಹೊರಬಿದ್ದಿತ್ತು. ವಕ್ಫ್ ಮಂಡಳಿಯನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಧಾರ್ಮಿಕ ಮುಖಂಡರ ಜೊತೆ ಸಮಾಲೋಚಿಸಿ, ಅತೀಕ್ರಮಣ ತೆರವುಗೊಳಿಸುವುದಾಗಿ ಹೇಳಿದ್ದರು. ಆದರೆ, ಈಗ ಬೂಟಾಟಿಕೆ ಮಾಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.
ಒಂದೆಡೆ ಬಿಜೆಪಿ ವಕ್ಫ್ ಬಲವರ್ಧನೆ ಕುರಿತು ಮಾತನಾಡುತ್ತದೆ. ಮತ್ತೊಂದೆಡೆ ವಕ್ಫ್ ಕಾಯಿದೆಯನ್ನು ತೆಗೆದುಹಾಕಬೇಕೆಂದು ಆಗ್ರಹಿಸುತ್ತಿದೆ. 2014ರಲ್ಲಿ ಮೋದಿ ಸರಕಾರವೇ ವಕ್ಫ್ ಬಲವರ್ಧನೆಗೆ ಮುಂದಾಗಿತ್ತು. ಸಂಸದರಾದ ತೇಜಸ್ವಿ ಸೂರ್ಯ ಮತ್ತು ಶೋಭಾ ಕರಂದ್ಲಾಜೆ ಅವರು ಇಷ್ಟು ವರ್ಷಗಳ ಕಾಲ ತಮ್ಮ ಬೇಡಿಕೆಯ ಬಗ್ಗೆ ಮೌನ ವಹಿಸಿದ್ದು ಏಕೆ ಎಂದು ಪ್ರಶ್ನಿಸಿದರು.
10 ವರ್ಷಗಳ ಅಧಿಕಾರದ ನಂತರವೂ ವಕ್ಫ್ ಕಾಯಿದೆ ವಿರುದ್ಧ ಕ್ರಮ ಕೈಗೊಳ್ಳಲಿಲ್ಲವೇಕೆ? ಬಿಜೆಪಿ ನಾಯಕರು ವಕ್ಫ್ ಕಾಯಿದೆಯನ್ನು ಅಸಾಂವಿಧಾನಿಕ ಎಂದು ಭಾವಿಸಿದರೆ, ಅದನ್ನು ಬದಲಾಯಿಸುವ ಅಥವಾ ರದ್ದುಗೊಳಿಸುವ ನಿರ್ಧಾರವನ್ನು ಹಿಂದೆ ಏಕೆ ತೆಗೆದುಕೊಳ್ಳಲಿಲ್ಲ. ಇಂದು ಎಲ್ಲಾ ವಕ್ಫ್ ಸಮಸ್ಯೆಗಳಿಗೆ ಜವಾಹರಲಾಲ್ ನೆಹರೂ ಅವರನ್ನು ದೂಷಿಸುತ್ತಿದ್ದಾರೆಂದು ಕಿಡಿಕಾರಿದರು.
ಉಪಚುನಾವಣೆ ಹತ್ತಿರ ಬರುತ್ತಿದ್ದು, ಮತ ಗಳಿಸಲು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಕೋಮುಗಲಭೆ ಸೃಷ್ಟಿಸಿ ಅದರಿಂದ ರಾಜಕೀಯ ಲಾಭ ಪಡೆಯುವುದು ಆ ಪಕ್ಷದ ಉದ್ದೇಶವಾಗಿದೆ ಎಂದು ಆರೋಪಿಸಿದರು.
ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ವಿಜಯಪುರಕ್ಕೆ ಭೇಟಿ ನೀಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿ, ನಿಯಮಾನುಸಾರ ಸಭಾಧ್ಯಕ್ಷರಿಂದ ಅನುಮತಿ ಪಡೆದು ಇತರ ಜೆಪಿಸಿ ಸದಸ್ಯರೊಂದಿಗೆ ಆಗಮಿಸಬೇಕು. ಆದರೆ, ಜಗದಾಂಬಿಕಾ ಪಾಲ್ ವೈಯಕ್ತಿಕವಾಗಿ ಆಗಮಿಸಿದ್ದು, ಇದು ಸರಿಯಲ್ಲ ಎಂದು ತಿಳಿಸಿದರು.
ಬಳಿಕ ತಮ್ಮ ಅನಿರ್ದಿಷ್ಟಾವಧಿ ಮುಷ್ಕರವನ್ನು ಬಿಜೆಪಿ ಹಿಂತೆಗೆದುಕೊಂಡಿದ್ದರ ಕುರಿತಂತೆಯೂ ಎಂಬಿ.ಪಾಟೀಲ್ ಅವರು ವ್ಯಂಗ್ಯವಾಡಿದರು.
1974 ರ ವಕ್ಫ್ ಅಧಿಸೂಚನೆಯನ್ನು ಹಿಂಪಡೆಯಬೇಕೆಂದು ಅವರು ಆಗ್ರಹಿಸಿದ್ದರು. ಆದರೆ, ಸರ್ಕಾರ ನಿರ್ಧಾರ ತೆಗೆದುಕೊಳ್ಳದ ಹೊರತಾಗಿಯೂ ಪ್ರತಿಭಟನೆ ಹಿಂಪಡೆದಿದ್ದಾರೆ. ಬಿಜೆಪಿಯವರು ಮತ್ತೆ ಪ್ರತಿಭಟನೆ ನಡೆಸಬೇಕೆಂದು ಮನವಿ ಮಾಡುತ್ತೇನೆಂದು ವ್ಯಂಗ್ಯವಾಡಿದರು