ಬೆಂಗಳೂರು: ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಇತರ ಕುಟುಂಬ ಸದಸ್ಯರ ವಿರುದ್ಧ ವಿಚಾರಣೆಗೆ ಒಳಪಡಿಸುವ ಮನವಿಯನ್ನು ವಜಾಗೊಳಿಸಿದ ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಈ ಪ್ರಕರಣದಲ್ಲಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಿಕಾರಿಪುರ ಶಾಸಕ ವಿಜಯೇಂದ್ರ ಹಾಗೂ ಇತರ ಸಂಬಂಧಿಕರ ವಿರುದ್ಧ ಭ್ರಷ್ಟಾಚಾರದ ಆರೋಪಗಳಿವೆ. ಬೆಂಗಳೂರಿನ ಬಿದರಹಳ್ಳಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಸತಿ ಸಮುಚ್ಚಯ ಯೋಜನೆಗೆ ಸಂಬಂಧಿಸಿದ ಗುತ್ತಿಗೆ ನೀಡುವಲ್ಲಿ ಭ್ರಷ್ಟಾಚಾರ, ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ಕೆ ಪಾಟೀಲ್ ತಿಳಿಸಿದ್ದಾರೆ.
ಬಿಡಿಎ ಗುತ್ತಿಗೆ ಪಡೆಯಲು ಎಂಎಸ್ ರಾಮಲಿಂಗಂ ಕನ್ಸ್ಟ್ರಕ್ಷನ್ ಕಂಪನಿ ಮತ್ತು ಕೆಲ ಶೆಲ್ ಕಂಪನಿಗಳಿಂದ ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರು ಕೋಟ್ಯಂತರ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಟಿ.ಜೆ ಅಬ್ರಾಹಂ ಖಾಸಗಿ ದೂರು ನೀಡಿದ್ದರು. ಆದರೆ ಯಡಿಯೂರಪ್ಪ ವಿರುದ್ಧದ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲು ರಾಜ್ಯಪಾಲರು ನಿರಾಕರಿಸಿದ್ದರು. ಹೀಗಾಗಿ ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಶೇಷ ನ್ಯಾಯಾಲಯ 2021ರ ಜುಲೈ 8ರಂದು ಅಬ್ರಾಹಂ ದೂರನ್ನು ವಜಾಗೊಳಿಸಿತ್ತು.
ಯಡಿಯೂರಪ್ಪ ಪರವಾಗಿ ಐಎಎಸ್ ಅಧಿಕಾರಿ ಜಿಸಿ ಪ್ರಕಾಶ್ 12 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಪ್ರಕಾಶ್ ವಸೂಲಿ ಮಾಡಿ ಮಗನ ಮೂಲಕ ಯಡಿಯೂರಪ್ಪಗೆ ಪಾವತಿಸಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ, ವಿಜಯೇಂದ್ರ, ಶಶಿದರ್ ಮರಡಿ ಮತ್ತು ಸಂಜಯ್ ಶ್ರೀಗಳು ಶೆಲ್ ಕಂಪನಿಗಳನ್ನು ಬಳಸಿಕೊಂಡು ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪಿಸಲಾಗಿತ್ತು.