ಬೆಳಗಾವಿ: ದೆಹಲಿಗೆ ತೆರಳಿ ಹೈಕಮಾಂಡ್ ಜತೆ ಮಾತುಕತೆ ನಡೆಸಿ ಬಂದ ಬಳಿಕವೂ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಎಸ್ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ಅವರ ವಿರುದ್ಧ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಯತ್ನಾಳ್ ಹೇಳಿಕೆ ಹೈಕಮಾಂಡ್ ಅಂಗಳ ತಲುಪಿ, ಶಿಸ್ತು ಸಮಿತಿ ನೋಟಿಸ್ ನೀಡಿತ್ತು. ಬಹಿರಂಗ ಹೇಳಿಕೆ ನೀಡದಂತೆ ಶಿಸ್ತು ಸಮಿತಿ ಸೂಚನೆ ನೀಡಿದ ಬಳಿಕವೂ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಬಹಿರಂಗವಾಗಿಯೇ ಹರಿಹಾಯ್ದಿದ್ದಾರೆ.
ಅವರು, “ಸಮುದಾಯದಲ್ಲಿ ಬೇರೆ ವ್ಯಕ್ತಿಗಳನ್ನು ಬೆಳೆಯಲು ಬಿಎಸ್ ಯಡಿಯೂರಪ್ಪ ಬಿಡಲ್ಲ. ಜಗದೀಶ್ ಶೆಟ್ಟರ್, ಬಿ.ಬಿ.ಶಿವಪ್ಪ ಅವರನ್ನು ಬೆಳೆಯಲು ಬಿಎಸ್ ಯಡಿಯೂರಪ್ಪ ಬಿಡಲಿಲ್ಲ. ಎಸ್.ಮಲ್ಲಿಕಾರ್ಜುನ್ ಅವರನ್ನು ಏನ್ ಮಾಡಿದರು? ಬಿ.ಬಿ.ಶಿವಪ್ಪ ಅವರನ್ನು ರಾಜಕೀಯವಾಗಿ ಹೇಗೆ ಮುಗಿಸಿದರು ಅಂತ ಎಲ್ಲವೂ ಗೊತ್ತಿದೆ” ಎಂದು ಹೇಳಿದರು.
ಹಾಗೆಯೇ, “ನನ್ನನ್ನು ಸಹ ರಾಜಕೀಯವಾಗಿ ಮುಗಿಸಬೇಕು ಅಂದುಕೊಂಡಿದ್ದಾರೆ. ನಮ್ಮ ವಿರುದ್ಧ ವಿಜಯಪುರದಲ್ಲಿ ತಂಡ ಕಟ್ಟುವ ಕೆಲಸ ಆಗುತ್ತಿದೆ. ಬಿಎಸ್ ಯಡಿಯೂರಪ್ಪ ಅವರ ಮಾತಿನ ಹಿಂದೆ ತಂತ್ರಗಾರಿಕೆ ಏನಿದೆ ಗೊತ್ತಿಲ್ಲ. ಕೇಂದ್ರ ನಾಯಕರನ್ನು ಖುಷಿ ಪಡಿಸಲು ಬಿಎಸ್ ಯಡಿಯೂರಪ್ಪ ಹೇಳಿರಬಹುದೇನೋ?” ಎಂದು ವಾಗ್ದಾಳಿ ಮಾಡಿದರು.
ಬಸನಗೌಡ ಪಾಟೀಲ ಯತ್ನಾಳ್ ಅವರು ಹೊರಗಿನವರಲ್ಲ, ಕೆಲವು ಕಾರಣಗಳಿಂದ ಆಕ್ರೋಶಗೊಂಡಿದ್ದಾರೆ. ಕೂತು ಮಾತನಾಡೋಣ. ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗಬೇಕು. ವಿಜಯೇಂದ್ರ ಅವರ ನಿರೀಕ್ಷೆಯೂ ಇದೇ ಆಗಿದೆ. ಯಾವುದೇ ಲೋಪದೋಷಗಳಿದ್ದರೆ ಎದುರುಬದುರು ಕುಳಿತು ಚರ್ಚಿಸುತ್ತೇವೆ ಎಂದು ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಹೇಳಿದ್ದರು.
ಇತ್ತೀಚಿಗೆ ನಡೆದ ಮೂರು ಕ್ಷೇತ್ರಗಳ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಸೋಲುಂಡಿದೆ. ಇದಕ್ಕೆ ಪೂಜ್ಯ ತಂದೆ ಮತ್ತು ಅವರ ಮಗ ನೇರ ಕಾರಣ ಎಂದು ಬಿಎಸ್ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ವಿರುದ್ಧ ನೇರಾ ನೇರಾ ಆರೋಪ ಮಾಡಿದ್ದರು. ಬಿಜೆಪಿ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಕೆಲಸ ಮಾಡುತ್ತಿಲ್ಲ. ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಹೋರಾಟ ನಿರಂತರವಾಗಿರುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದರು.
ಬಿಎಸ್ ಯಡಿಯೂರಪ್ಪ ಬೆದರಿಕೆಯಿಂದ ಬಿವೈ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಗಂಭೀರವಾದ ಪ್ರಕರಣಗಳಿವೆ. ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ ಅವರು ಹೆದರಬೇಕು, ನಾನು ಯಾಕೆ ಹೆದರಬೇಕು? ಎಂದರು.