ಬೆಳಗಾವಿ: ರಾಜ್ಯ ಬಿಜೆಪಿಯಲ್ಲಿ ಎದ್ದಿರುವ ಗೊಂದಲಕ್ಕೆ ತೆರೆ ಎಳೆಯಲು ಬಾಲಚಂದ್ರ ಜಾರಕಿಹೊಳಿ ಅವರನ್ನು ಬಳಕೆ ಮಾಡಿಕೊಳ್ಳಲು ಬಿ.ವೈ.ವಿಜಯೇಂದ್ರ ಹಾಗೂ ಆರ್. ಅಶೋಕ್ ನಿರ್ಧರಿಸಿದ್ದಾರೆ. ಕಳೆದ ಸೋಮವಾರ ಬೆಳಗಾವಿಯ ಖಾಸಗಿ ಹೊಟೇಲ್ನಲ್ಲಿ ನಡೆದ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆಯಲ್ಲಿ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮಾನಪ್ಪ ವಜ್ಜಲ್, ನಾಯಕರಿಗೆ ಸಲಹೆಯೊಂದನ್ನ ನೀಡಿದ್ದಾರೆ.
ರಾಜ್ಯ ಬಿಜೆಪಿಯ ನಾಯಕತ್ವದಲ್ಲಿ ಗೊಂದಲ ಉಂಟಾಗಿರುವುದನ್ನು ಸರಿಪಡಿಸುವ ನಿಟ್ಟಿನಲ್ಲಿ ಮೊದಲಿಗೆ ಯತ್ನಾಳ್ ಅಂಡ್ ಟೀಂ ಮಾಡುತ್ತಿರುವ ಡ್ಯಾಮೇಜ್ ಕಂಟ್ರೋಲ್ ಮಾಡಬೇಕು. ಇದಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿಗೆ ಜವಾಬ್ದಾರಿ ನೀಡಿ ಎಂದು ಪ್ರಸ್ತಾಪ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದು, ಯಾರಾದ್ರೂ ಪರವಾಗಿಲ್ಲ. ಬಂಡಾಯ, ಗೊಂದಲ ಸರಿಪಡಿಸುತ್ತೇವೆ ಎಂಬ ಮನಸ್ಥಿತಿ ಇರುವವರು ಬೇಕು ಅಷ್ಟೇ. ಬಾಲಚಂದ್ರ ಜಾರಕಿಹೊಳಿ ಅವರು ಬಂಡಾಯ ಶಮನಗೊಳಿಸುವ ಜವಾಬ್ದಾರಿ ನಿರ್ವಹಣೆ ಮಾಡುತ್ತೇನೆ ಎಂದರೆ ನಮ್ಮದೇನು ಅಭ್ಯಂತರವಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಈ ಮೂಲಕ ಯತ್ನಾಳ್ ಅಂಡ್ ಟೀಂ ಕಟ್ಟಿ ಹಾಕಲು ಬಾಲಚಂದ್ರ ಜಾರಕಿಹೊಳಿ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಸದ್ಯದಲ್ಲೇ ಬಿಜೆಪಿಯ ಬಂಡಾಯ ನಾಯಕರ ಜೊತೆಗೆ ಮಾತುಕತೆಗೆ ವೇದಿಕೆ ಸಿದ್ಧಗೊಳ್ಳಲಿದೆ ಎನ್ನಲಾಗಿದೆ.