ರಾಯಚೂರು: ಹಿಂದೂ ಎಂಬುದು ಅತ್ಯಂತ ಅವಮಾನಕರ ಪದವಾಗಿದೆ. ನಾವು ಹಿಂದೂ ಎಂದು ಹೇಳಿಕೊಳ್ಳುವುದೇ ಒಂದು ಅವಮಾನಕರ. ಯಾರು ಹೀನರಾಗಿದ್ದಾರೋ, ಯಾರು ದೂಷಣೆಗೆ ಒಳಗಾಗಿದ್ದಾರೋ ಅವರೇ ಹಿಂದೂ ಎಂದು ಲೇಖಕ ಪ್ರೊ. ಕೆ.ಎಸ್ ಭಗವಾನ್ ಹೇಳಿದ್ದಾರೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾ. ತಿಂಥಣಿಯ ಕನಕ ಮಠದಲ್ಲಿ ಮಾತನಾಡಿರುವ ಭಗವಾನ್ ಅವರು, ಹಿಂದೂ ಎಂಬ ಶಬ್ಧ 1030ನೇ ಇಸ್ವಿಯಲ್ಲಿ ಬಂದಿದೆ. ಪರ್ಶಿಯನ್ ಲೇಖಕ ಆಲ್ಬೇರೋನಿ ಎಂಬುವವನು ಭಾರತದ ಬಗ್ಗೆ ಬರೆಯುತ್ತಾ ಸಿಂಧೂ ನದಿಯನ್ನು ಹಿಂದೂ ಅಂತ ಕರೆದರು. ಪರ್ಶಿಯನ್ ಭಾಷೆಯಲ್ಲಿ ಸಕಾರ ಇಲ್ಲವಂತೆ, ಸಕಾರ, ಹಕಾರವಾಗುತ್ತೆ. ಆದ್ದರಿಂದ ಅವರು ಸಿಂಧೂವನ್ನು ಹಿಂದೂ ಎಂದು ಕರೆದರು ಎಂದು ಹೇಳಿದ್ದಾರೆ.
ಮುಂದೆ ಅಕ್ಬರ್ನ ಕಾಲದಲ್ಲಿ ಈ ದೇಶಕ್ಕೆ ಹಿಂದೂಸ್ತಾನ್ ಎಂಬ ಹೆಸರು ಬಂತು. ಹೀಗಾಗಿ ಹಳೆಯ ಗ್ರಂಥಗಳಲ್ಲಿ ಹಿಂದೂ ಎನ್ನುವ ಶಬ್ಧ, ವೇದಗಳು, ಪುರಾಣಗಳು ಉಪನಿಷತ್ ಗಳಲ್ಲಿ ಹಿಂದೂ ಎನ್ನುವ ಪದ ಇಲ್ಲ. ಈ ಹಿಂದೂ ಎನ್ನುವ ಶಬ್ದಕ್ಕೆ ಕಾಶ್ಮೀರಿ ಶೈವ ಗ್ರಂಥದಲ್ಲಿ ಹೀರಂಚ ದುಶ್ಯಂತೈವ ಹಿಂದೂ ವಿದುಶವಿಚತೇ ಅಂತ ಇದೆ. ಇದರ ಅರ್ಥ ಯಾರು ಹೀನನಾಗಿದಾನೋ, ಯಾರು ದೂಷಣೆಗೊಳಗಾಗಿದಾನೋ ಅವನು ಹಿಂದೂ ಅಂತ ಅವರು ಹೇಳ್ತಾರೆ. ಹಾಗಾಗಿ ಹಿಂದೂ ಎನ್ನುವಂತ ಶಬ್ಧ ಬಹಳಷ್ಟು ಅಪಮಾನಕರವಾಗಿದೆ ಎಂದು ಭಗವಾನ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಚಾತುರ್ವಣದಲ್ಲಿ ಶೂದ್ರ ಅನ್ನೋ ಶಬ್ದ ಸಹ ಮನುಸ್ಮೃತಿ ಪ್ರಕಾರ ಅಪಮಾನಕ್ಕೆ ಒಳಗಾಗಿದೆ. ಸಂವಿಧಾನದಲ್ಲಿ ಸಮಾನತೆ ಸ್ವಾತಂತ್ರ್ಯ ಸೇರಿ ದೊಡ್ಡ ತತ್ವವನ್ನ ಬಾಬಾ ಸಾಹೇಬರು ಅಳವಡಿಸಿದ್ದಾರೆ. ಅಂಥ ಸಂವಿಧಾನ ತೆಗೆದು ಹಾಕಲು ಕುತಂತ್ರ ಮಾಡುತ್ತಿದ್ದಾರೆ. ನಾವು ಇದಕ್ಕೆ ಅವಕಾಶ ಕೊಡಬಾರದು, ಮತ್ತೆ ಮನಸ್ಮೃತಿ ವಾಪಸ್ ತರದಂತೆ ತಡೆಯಬೇಕಿದೆ. ಮನಸ್ಮೃತಿಯಿಂದ ಶೂದ್ರರನ್ನ ಅನಾಗರಿಕರಂತೆ ನೋಡಲಾಯಿತು. ಈ ಕಾರಣಕ್ಕಾಗಿಯೇ ಬಾಬಾ ಸಾಹೇಬರು, ಪೆರಿಯಾರ್ ಮನಸ್ಮೃತಿಯನ್ನ ಸುಟ್ಟು ಹಾಕಿದರು. ಸಂವಿಧಾನ ಪರ ಹೋರಾಡಬೇಕು ಮನು ಸ್ಮೃತಿಯನ್ನ ತಿರಸ್ಕರಿಸಬೇಕು ಎಂದು ಕರೆ ನೀಡಿದರು.