ಬೆಂಗಳೂರು: ಬೆಂಗಳೂರಿನ 21 ವರ್ಷದ ವೃತ್ತಿಪರ ರೇಸರ್ ತಿಜಿಲ್ ರಾವ್ ಅವರು 27ನೇ ಜೆಕೆ ಟೈರ್ ರಾಷ್ಟ್ರೀಯ ರೇಸಿಂಗ್ನ ಮೈನವಿರೇಳಿಸುವ ಋತುವಿನಲ್ಲಿ ಭಾಗವಹಿಸಿ ಜೆಕೆ ಎಲ್ಜಿಬಿ ಫಾರ್ಮುಲಾ 4 ರ 2024 ರ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
27ನೇಯ ಜೆಕೆ ಟೈರ್ ರಾಷ್ಟ್ರೀಯ ರೇಸಿಂಗ್ ಚಾಂಪಿಯನ್ಶಿಪ್ 2024 ರ 12 ರೇಸ್ಗಳಲ್ಲಿ 9 ಪೋಡಿಯಂ ಪೂರ್ಣಗೊಳಿಸುವ ಮೂಲಕ ಈ ರೇಸ್ ಋತುವನ್ನು ಪೂರ್ಣಗೊಳಿಸಿದ್ದಾರೆ.ಡಾರ್ಕ್ಡನ್ ರೇಸಿಂಗ್ನೊಂದಿಗೆ ಸ್ಪರ್ಧಿಸುತ್ತ ತಿಜಿಲ್ ರಾವ್, ಈ ರೇಸ್ನ ಋತುವಿನ ಉದ್ದಕ್ಕೂ ಅಸಾಧಾರಣ ಕೌಶಲ, ಹಿನ್ನಡೆಯಿಂದ ಚೇತರಿಕೆ ಮತ್ತು ದೃಢ ನಿರ್ಧಾರವನ್ನು ಪ್ರದರ್ಶಿಸಿದರು. ಈ ಮೂಲಕ, ಭಾರತದ ಉಜ್ವಲ ಯುವ ರೇಸಿಂಗ್ ಪ್ರತಿಭೆಗಳಲ್ಲಿ ಒಬ್ಬರಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿ ಕೊಂಡಿದ್ದಾರೆ.
ಸತತ 27ನೇ ವರ್ಷದಲ್ಲಿ ಮುನ್ನಡೆದಿರುವ ಜೆಕೆ ಟೈರ್ ರಾಷ್ಟ್ರೀಯ ರೇಸಿಂಗ್ ಚಾಂಪಿಯನ್ಶಿಪ್- ಮೋಟರ್ಸ್ಪೋರ್ಟ್ನ ಜನಪ್ರಿಯ ತಾರೆಗಳಾದ ನರೇನ್ ಕಾರ್ತಿಕೇಯನ್, ಕರುಣ್ ಚಂದ್ಹೋಕ್, ಅರ್ಮಾನ್ ಇಬ್ರಾಹಿಂ, ಅರ್ಜುನ್ ಮೈನಿ, ಕುಶ್ ಮೈನಿ ಮತ್ತಿತರರನ್ನು ಬೆಳಕಿಗೆ ತಂದಿದೆ.
ಈ ವರ್ಷ, ತಿಜಿಲ್ ರಾವ್ ಚಾಂಪಿಯನ್ಶಿಪ್ನ ಎಲ್ಲಾ ಐದು ಸುತ್ತುಗಳಲ್ಲಿ ಗಮನ ಸೆಳೆಯುವ ಪ್ರದರ್ಶನ ನೀಡಿದ್ದಾರೆ.