ಯುವರಾಜ್ ಸಿಂಗ್ ಅವರ ಹೊಡೆಬಡಿಯ ಅರ್ಧಶತಕ ಮತ್ತು ಶಾಬಾಝ್ ನದೀಂ ಅವರ ಮಾರಕ ಬೌಲಿಂಗ್ ನ ನೆರವಿನಿಂದ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು 94 ರನ್ ಗಳಿಂದ ಪರಾಭವಗೊಳಿಸಿ ಇಂಟರ್ ನ್ಯಾಶನಲ್ ಮಾಸ್ಟರ್ಸ್ ಲೀಗ್ ಟೂರ್ನಿಯ ಫೈನಲ್ ಪ್ರವೇಶಿಸಿದೆ.ರಾಯಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪ್ರಥಮ ಸೆಮಿಫೈನಲ್ ನಲ್ಲಿ ಭಾರತ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ಕೃಷ್ಟ ಪ್ರದರ್ಶನ ನೀಡಿ ಗೆಲುವು ಸಾಧಿಸಿತು ಗೆಲುವಿಗೆ 221 ರನ್ ಗಳ ಕಠಿಣ ಗುರಿ ಪಡೆದ ಆಸ್ಟ್ರೇಲಿಯಾ ತಂಡ 18.1 ಓವರ್ ಗಳಲ್ಲಿ 126 ರನ್ ಗಳಿಗೆ ಸರ್ವಪತನ ಕಂಡಿತು.
ವಿನಯ್, ನದೀಂ ಮಾರಕ ಬೌಲಿಂಗ್ಭಾರತ ತಂಡದ ಬೌಲರ್ ಗಳ ಮುಂದೆ ಆಸ್ಟ್ರೇಲಿಯಾ ವಿಕೆಟ್ ಗಳು ನಿರಂತರವಾಗಿ ಉರುಳುತ್ತಾ ಹೋದವು ನಾಯಕ ಶೇನ್ ವಾಟ್ಸನ್(5) ಅವರನ್ನು ವಿನಯ್ ಕುಮಾರ್ ಪವನ್ ನೇಗಿಗೆ ಕ್ಯಾಚ್ ಕೊಡಿಸುವಲ್ಲಿ ಯಶಸ್ವಿಯಾದರು. ಮಧ್ಯಮ ಕ್ರಮಾಂಕದಲ್ಲಿ ಬೆನ್ ಕಟ್ಟಿಂಗ್ ಹೊರತುಪಡಿಸಿದರೆ ಬೇರಾರೂ ದೀರ್ಘಕಾಲ ಬಾಳಲಿಲ್ಲ. 30 ಎಸೆತಗಳಿಂದ ತಲಾ 3 ಬೌಂಡರಿ ಮತ್ತು ಸಿಕ್ಸರ್ ಗಳನ್ನು ಬಾರಿಸಿದರು. ಭಾರತದ ಪರವಾಗಿ ಸ್ಪಿನ್ನರ್ ಶಾಬಾಜ್ ನದೀಂ ಅವರು 15 ರನ್ ಗೆ 4 ವಿಕೆಟ್ ಕಬಳಿಸಿದರು. ಅರ್ಹವಾಗಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಕರ್ನಾಕದ ವಿನಯ್ ಕುಮಾರ್ ಅರು 10 ರನ್ ಗೆ 2 ವಿಕೆಟ್ ಮತ್ತು ಇರ್ಫಾನ್ ಪಠಾಣ್ ಅವರು 31 ರನ್ ಗೆ 2 ವಿಕೆಟ್ ಗಳಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಸಚಿನ್ ತೆಂಡೂಲ್ಕರ್ ನೇತೃತ್ವದ ಭಾರತ ತಂಡ ಏರಡನೇ ಓವರ್ ನ ಕೊನೆಯ ಎಸೆತದಲ್ಲಿ ಅಂಬಟಿ ರಾಯುಡು(5) ಅವರ ವಿಕೆಟ್ ಅನ್ನು ಕಳೆದುಕೊಂಡಿತು. ಆದರೆ ಸಚಿನ್ ತೆಂಡೂಲ್ಕರ್ ಅವರು ಕೇವಲ 30 ಎಸತೆಗಳಿಂದ 42 ರನ್ ಚಚ್ಚಿದರು. ಅವರ ಇನ್ನಿಂಗ್ಸ್ ನಲ್ಲಿ 7 ಬೌಂಡರಿಗಳಿದ್ದವು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಆಗಮಿಸಿದ ಯುವರಾಜ್ ಸಿಂಗ್ ಅವರು ಕೇವಲ 30 ಎಸೆತಗಳಲ್ಲಿ 59 ರನ್ ಕಲೆ ಹಾಕಿದರು. ಅವರ ಇನ್ನಿಂಗ್ಸ್ ನಲ್ಲಿ 7 ಸಿಕ್ಸರ್ ಮತ್ತು 1 ಬೌಂಡರಿಗಳಿದ್ದವು. ಕರ್ನಾಟಕದ ಸ್ಟುವರ್ಟ್ ಬಿನ್ನಿ ಅವರು 21 ಎಸೆತದಲ್ಲಿ 5 ಬೌಂಡರಿ 1 ಸಿಕ್ಸರ್ ಇದ್ದ 36 ರನ್ ಗಳಿಸಿದರು.