ಬೆಂಗಳೂರು: ”ನನಗೆ ಸೂಪರ್ ಪವರ್ ಇದ್ದರೆ ಭಾರತದ ಸಣ್ಣ ಪಟ್ಟಣಗಳಲ್ಲಿ ರಂಗಶಂಕರದಂತಹ ರಂಗಮಂದಿರಗಳನ್ನು ಸ್ಥಾಪಿಸುವಂತೆ ಶ್ರೀಮಂತರನ್ನು ಕೇಳಿಕೊಳ್ಳುತ್ತಿದೆ” ಇದು ಹಿರಿಯ ರಂಗಕರ್ಮಿ, ನಟಿ ರಂಗಶಂಕರದ ನಿರ್ದೇಶಕಿ 2024ನೇ ಸಾಲಿನ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (New Indian Express)ನ ದೇವಿ ಪ್ರಶಸ್ತಿ ವಿಜೇತೆ ಅರುಂಧತಿ ನಾಗ್ ಅವರ ಮಾತು.
ಅರುಂಧತಿ ನಾಗ್ ಅವರು ರಂಗಶಂಕರದ ಸಂಸ್ಥಾಪಕರು — ಬೆಂಗಳೂರಿನ ಅಚ್ಚುಮೆಚ್ಚಿನ ರಂಗಮಂದಿರಗಳಲ್ಲಿ ಒಂದು ಮತ್ತು ಅತ್ಯಂತ ಜನಪ್ರಿಯವಾದದ್ದು. ರಂಗಶಂಕರ ಇತ್ತೀಚೆಗೆ ತನ್ನ 20ನೇ ವಾರ್ಷಿಕೋತ್ಸವವನ್ನು ಆಚರಿಸಿದೆ.
ಅವರು ‘ಲೀಡಿಂಗ್ ಚೇಂಜ್: ವಾಟ್ಸ್ ದಿ ಸೂಪರ್ ಪವರ್’ ಎಂಬ ಶೀರ್ಷಿಕೆಯ ದುಂಡುಮೇಜಿನ ಮಾತುಕತೆಯಲ್ಲಿ ಖ್ಯಾತ ಲೇಖಕಿ ಮತ್ತು ಪತ್ರಕರ್ತೆ ಕಾವೇರಿ ಬಾಮ್ಜೈ ಅವರೊಂದಿಗೆ ನಡೆದ ಸಂಭಾಷಣೆ ವೇಳೆ ಹೀಗೆ ಹೇಳಿದ್ದಾರೆ. ನಿನ್ನೆ ಶನಿವಾರ ಬೆಂಗಳೂರಿನಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಸ್ಥಾಪಿಸಿದ ದೇವಿ ಪ್ರಶಸ್ತಿಗಳ 29 ನೇ ಆವೃತ್ತಿಯ ಕಾರ್ಯಕ್ರಮ ಏರ್ಪಟ್ಟಿತ್ತು.
ದೆಹಲಿ, ಮುಂಬೈ, ಬೆಂಗಳೂರು ಮತ್ತು ಇತರ ದೊಡ್ಡ ನಗರಗಳಲ್ಲಿ ರಂಗಮಂದಿರಗಳಿರುತ್ತವೆ. ಅಲ್ಲಿಂದಾಚೆಗೆ ಸಣ್ಣಪುಟ್ಟ ಪಟ್ಟಣಗಳಲ್ಲಿ ರಂಗಮಂದಿರಗಳು ತಲೆಯೆತ್ತಬೇಕು. ರಂಗಮಂದಿರಗಳನ್ನು ‘ಬಿ’ ಮತ್ತು ‘ಸಿ’ ವರ್ಗದ ನಗರಗಳಿಗೆ ಕೊಂಡೊಯ್ಯುವ ಸಮಯ ಬಂದಿದೆ ಎಂದು ಹೇಳಿದರು. ಸಣ್ಣ ಪಟ್ಟಣಗಳಲ್ಲಿ ರಂಗಶಂಕರದಂತಹ ರಂಗಮಂದಿರಗಳು ಸ್ಥಾಪನೆಯಾಗುವುದರಿಂದ ದೊಡ್ಡ ಬದಲಾವಣೆಯನ್ನು ತರಬಹುದು, ಇದು ತಮ್ಮ ಕನಸಾಗಿದೆ ಎಂದರು.