ದೊಡ್ಡಬಳ್ಳಾಪುರ: ಘಾಟಿ ಸುಬ್ರಹ್ಮಣ್ಯ ರಥೋತ್ಸವ ಭಾನುವಾರ ಸಾವಿರಾರು ಭಕ್ತರು ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಭಕ್ತರು ರಥಕ್ಕೆ ಬಾಳೆ ಹಣ್ಣು, ಹೂವು ಅರ್ಪಿಸಿ ಹರಕೆ ತೀರಿಸಿದರು.
ಬೆಳಗಿನ ಜಾವ 4 ರಿಂದಲೇ ದರ್ಶನ ಆರಂಭವಾಗಿತ್ತು. ಸುಬ್ರಹಣ್ಯ ಮೂರ್ತಿಯನ್ನು ಹೂವಿನಿಂದ ಅಲಂಕರಿಸಲಾಗಿತ್ತು. ದರ್ಶನಕ್ಕೆ ಸುಮಾರು ಅರ್ಧ ಕಿ.ಮೀ ಹೆಚ್ಚು ದೂರದವರೆಗೆ ಭಕ್ತರು ಸಾಲುಗಟ್ಟಿ ನಿಂತಿದ್ದರು.ಘಾಟಿಯ ನಾಗರಕಲ್ಲುಗಳಿಗೆ ಮಹಿಳೆಯರು ಹಾಲೆರೆದು ಪೂಜೆ ಸಲ್ಲಿಸಿದರು.ದೇವಾಲಯ ದಿಂದ ದೂರದಲ್ಲೇ ವಾಹನ ನಿಲುಗಡೆಗೆ ಸ್ಥಳ ನಿಗದಿ ಮಾಡಲಾಗಿತ್ತು. ಹಿರಿಯ ನಾಗರಿಕರು, ಮಕ್ಕಳನ್ನು ದೇವಾಲಯದ ಬಳಿಗೆ ಆಟೋಗಳಲ್ಲಿ ಉಚಿತವಾಗಿ ಕರೆದುಕೊಂಡುವ ಬರುವ ವ್ಯವಸ್ಥೆ ಮಾಡಲಾಗಿತ್ತು. ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ದೇವಾಲಯದ ವತಿಯಿಂದ ಅನ್ನಸಂತರ್ಪಣೆ, ಕುಡಿಯುವ ನೀರಿನ ಸೌಲಭ್ಯ ಮಾಡಲಾಗಿತ್ತು. ಮಾಹಿತಿ ಕೇಂದ್ರವನ್ನೂ ತೆರೆಯಲಾಗಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ರಥೋತ್ಸವಕ್ಕೆ ಚಾಲನೆ ನೀಡಿದರು. ಶಾಸಕ ಧೀರಜ್ ಮುನಿರಾಜ್, ಜಿಲ್ಲಾಧಿಕಾರಿ ಎನ್.ಶಿವಶಂಕರ್, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಎನ್. ಅನುರಾಧ, ಉಪವಿಭಾಗಾಧಿಕಾರಿ ಎನ್.ದುರ್ಗಾಶ್ರೀ, ಎಸ್ಪಿ ಸಿ.ಕೆ ಬಾಬಾ, ತಹಶೀಲ್ದಾರ್ ವಿದ್ಯಾ ವಿಭಾ ರಾಥೋಡ್,
ಇಒ ಮುನಿರಾಜು,ತಹಶಿಲ್ದಾರ್ ವಿಭಾ ವಿದ್ಯಾರಾಠೋಡ್ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.
ದಕ್ಷಿಣ ಭಾರತದಲ್ಲಿ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ತಾಲೂಕಿನ ಶ್ರೀ ಘಾಟಿ ಸುಬ್ರಮಣ್ಯ ಪುಣ್ಯ ಕ್ಷೇತ್ರದಲ್ಲಿ ಭಾನುವಾರ ಸ್ವಾಮಿಯ ಬ್ರಹ್ಮರಥೋತ್ಸವ ಅತ್ಯಂತ ವೈಭವದಿಂದ ಜರುಗಿತು. ಲಕ್ಷಾಂತರ ಜನ ಭಕ್ತಾಧಿಗಳು ರಾಜ್ಯದ ಹಲವು ಪ್ರದೇಶಗಳಿಂದಲೇ ಅಲ್ಲದೇ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಿಂದಲೂ ರಥೋತ್ಸವಕ್ಕೆ ಆಗಮಿಸಿದ್ದರು. ಭಾನುವಾರ ಮಧ್ಯಾಹ್ನ 12-20 ಗಂಟೆಗೆ ಸ್ವಾಮಿಯನ್ನು ಪ್ರತಿಷ್ಠಿಸಲಾಗಿದ್ದ ತೇರನ್ನು ಅರ್ಚಕರ ವೇದಘೋಷಗಳ ನಡುವೆ ಭಕ್ತಾಧಿಗಳು ಎಳೆದರು.ಕ್ಷೇತ್ರದಲ್ಲಿರುವ ನಾಗರಕಲ್ಲುಗಳಿಗೆ ಭಕ್ತ ಸಮೂಹ ಹಾಲೆರೆದು ಪೂಜಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಜಾತ್ರೆಯ ಅಂಗವಾಗಿ ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.