ಬೆಂಗಳೂರು: ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ಅಧಿವೇಶನ ಸಂದರ್ಭದಲ್ಲಿ ವಿಧಾನಪರಿಷತ್ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಶಾಸಕ ಸಿ.ಟಿ.ರವಿ ಅವಾಚ್ಯ ಶಬ್ದ ಬಳಸಿ ನಿಂದಿಸಿದರು ಎಂಬ ಪ್ರಕರಣ ಇದೀಗ ಸಿಐಡಿ ತನಿಖೆಗೆ ವಹಿಸಲಾಗಿದೆ.ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಿ.ಟಿ.ರವಿ ವಿರುದ್ಧ ನೀಡಿರುವ ದೂರು ಹಾಗೂ ಸಿ.ಟಿ.ರವಿ ಅವರ ಮೇಲೆ ಹಲ್ಲೆ ಯತ್ನ ಎಂಬ ವಿಷಯಕ್ಕೆ ಸಂಬಂಧಪಟ್ಟಂತೆ ಎರಡು ಪ್ರಕರಣಗಳು ಸಿಐಡಿಗೆ ವಹಿಸಲಾಗುವುದು.
ರಾಜ್ಯ ಪೊಲೀಸ್ ಮಹಾನಿರ್ದೇಶಕರು ನಿನ್ನೆ ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಸೂಚಿಸಿದ್ದಾರೆ.
ಎರಡು ಪ್ರಕರಣವನ್ನು ಇಂದು ಸಿಐಡಿ ತನಿಖೆಗೆ ವಹಿಸಲಾಗುವುದು ಎಂದು ಹೇಳಲಾಗಿದೆ.ಮತ್ತೊಂದೆಡೆ ಶಾಸಕ ಸಿ.ಟಿ.ರವಿ ಅವರು ತಮ್ಮ ವಿರುದ್ಧ ನಡೆದ ಹಲ್ಲೆ ಯತ್ನ ಪ್ರಕರಣ ಸೇರಿದಂತೆ ರಾತ್ರಿಯೀಡಿ ಪೊಲೀಸರು ತಮ್ಮನ್ನು ಸುತ್ತಾಡಿಸಿದ ಘಟನೆ ಬಗ್ಗೆ ದೂರು ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮಾನವ ಹಕ್ಕುಗಳ ಆಯೋಗ ಹಾಗೂ ವಿಧಾನಪರಿಷತ್ ಸಭಾಪತಿ ಅವರಿಗೆ ರವಿ ದೂರು ನೀಡಿಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಸದ್ಯ ಚಿಕ್ಕಮಗಳೂರಿನ ಬಸವನಹಳ್ಳಿಯ ಅವರ ನಿವಾಸದಲ್ಲಿರುವ ರವಿ ಬೆಂಗಳೂರಿಗೆ ಬಂದ ನಂತರ ದೂರು ಸಲ್ಲಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.