ನವದೆಹಲಿ: ಉಕ್ರೇನ್ನೊಂದಿಗೆ ನಡೆಯುತ್ತಿರುವ ಸಂಘರ್ಷದಲ್ಲಿ ರಷ್ಯಾ ಮಿಲಿಟರಿಯಿಂದ ನೇಮಕಗೊಂಡಿದ್ದ ಭಾರತೀಯ ಪ್ರಜೆಯೊಬ್ಬರು ಹತ್ಯೆಯಾಗಿದ್ದು, ಇನ್ನೊಬ್ಬರು ಗಾಯಗೊಂಡಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಭಾರತ ಸರ್ಕಾರ ರಷ್ಯಾವನ್ನು ಆಗ್ರಹಿಸಿದೆ.
ಕೇರಳದ ಭಾರತೀಯ ಪ್ರಜೆಯ ಹತ್ಯೆಯ ನಂತರ, ರಷ್ಯಾದ ಮಿಲಿಟರಿಯಿಂದ ನೇಮಕಗೊಂಡ ಭಾರತೀಯ ಪ್ರಜೆಗಳನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಭಾರತವು ರಷ್ಯಾಕ್ಕೆ ತನ್ನ ಬೇಡಿಕೆಯನ್ನು ಪುನರುಚ್ಚರಿಸಿದೆ.
ರಷ್ಯಾದ ಸೇನೆಯಲ್ಲಿ ಸೇವೆ ಸಲ್ಲಿಸಲು ನೇಮಕಗೊಂಡಿದ್ದ ಕೇರಳದ ಭಾರತೀಯ ಪ್ರಜೆಯೊಬ್ಬನ ದುರದೃಷ್ಟಕರ ಸಾವಿನ ಬಗ್ಗೆ ತಿಳಿದುಕೊಂಡಿದ್ದೇವೆ. ಅದೇ ರೀತಿ ನೇಮಕಗೊಂಡ ಕೇರಳದ ಮತ್ತೊಬ್ಬ ಭಾರತೀಯ ಪ್ರಜೆ ಗಾಯಗೊಂಡಿದ್ದು, ಮಾಸ್ಕೋದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಂದು MEA ವಕ್ತಾರ ರಣಧೀರ್ ಜೈಸ್ವಾಲ್ ಮಂಗಳವಾರ ಹೇಳಿದ್ದಾರೆ.
ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಭಾರತೀಯರಿಬ್ಬರು ಕುಟುಂಬಗಳೊಂದಿಗೆ ಸಂಪರ್ಕದಲ್ಲಿದೆ. ಸಾಧ್ಯವಿರುವ ಎಲ್ಲ ನೆರವು ನೀಡಲಾಗುತ್ತಿದೆ. ಮೃತನ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ರಷ್ಯಾದ ಆಡಳಿತದೊಂದಿಗೆ ಕಾರ್ಯ ನಿರ್ವಹಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಗಾಯಾಳುವನ್ನು ಬೇಗನೆ ಡಿಸ್ಟಾರ್ಜ್ ಮಾಡಿ, ಭಾರತಕ್ಕೆ ಕಳುಹಿಸುವಂತೆ ಕೇಳುತ್ತಿದ್ದೇವೆ. ಈ ವಿಚಾರವನ್ನು ಮಾಸ್ಕೋದಲ್ಲಿರುವ ರಷ್ಯಾ ಆಡಳಿತ ಹಾಗೂ ನವದೆಹಲಿಯಲ್ಲಿರುವ ರಷ್ಯಾ ರಾಯಭಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ರಷ್ಯಾ ಮಿಲಿಟರಿಯಲ್ಲಿರುವ ಉಳಿದ ಭಾರತೀಯ ಪ್ರಜೆಗಳನ್ನು ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಭಾರತ ಪುನರುಚ್ಚರಿಸಿದೆ ಎಂದು ಜೈಸ್ವಾಲ್ ಹೇಳಿದ್ದಾರೆ.