ತಿ.ನರಸೀಪುರ: ರಸ್ತೆ ಬದಿ ವ್ಯಾಪಾರಸ್ಥರನ್ನು ಪರ್ಯಾಯ ವ್ಯವಸ್ಥೆ ಕಲ್ಪಿಸದೆ ರಸ್ತೆ ಬದಿ ವ್ಯಾಪಾರಸ್ಥರನ್ನು ತೆರೆವುಗೊಳಿಸಿ ಸಂಕಷ್ಟಕ್ಕೆ ದೂಡಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ಪಟ್ಟಣದ ಪುರಸಭೆ ಕಚೇರಿ ಮುಂಭಾಗ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ದಸಂಸ ಜಿಲ್ಲಾ ಸಂಚಾಲಕ ಡಾ. ಆಲಗೂಡು ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ಕುರಿತು ಡಾ. ಆಲಗೂಡು ಚಂದ್ರಶೇಖರ್ ಮಾತನಾಡಿ ತುಂಬಾ ಶಿಥಿಲಾವಸ್ಥೆಯಲ್ಲಿರುವ ಮಾರ್ಕೆಟ್ ರಸ್ತೆ ವಾಣಿಜ್ಯ ಮಳಿಗೆ ಹಳೇ ಕಟ್ಟಡ ನೆಲಸಮಗೊಳಿಸಿ ಬೀದಿ ಬದಿ ವ್ಯಾಪಾರಸ್ಥರಿಗೆ ತುರ್ತಾಗಿ ಸ್ಥಳವಕಾಶ ಕಲ್ಪಿಸಿ ಕೊಡಬೇಕೆಂದು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದೇವೆ.ಪಟ್ಟಣ ಎಲ್ಲಾ ಭಾಗದ ರಸ್ತೆಗಳನ್ನು ವ್ಯಾಪಾರಸ್ಥ ಅಂಗಡಿ ಮಾಲೀಕರು ಮತ್ತು ರಸ್ತೆ ಬದಿ ವ್ಯಾಪಾರಿಗಳು ತಮಗಿಷ್ಟ ಬಂದಂತೆ ತಿರುಗಾಡುವ ಜಾಗ, ರಸ್ತೆಗಳನ್ನು ಆಕ್ರಮಿಸಿ ಕೊಂಡಿದ್ದ ಕಾರಣ ವಾಹನ ಸವಾರರಿಗೂ ಮತ್ತು ಪಾದಚಾರಿಗಳು ತಿರುಗಾಡಲಾಗದಷ್ಟು ಇಕ್ಕಟ್ಟಿನ ಸಮಸ್ಯೆ ತೊಂದರೆಗಳನ್ನು ದೈನಂದಿನ ಬಳಕೆಯ ವಸ್ತುಗಳನ್ನು ಖರೀದಿಸಲು ಆಗಮಿಸುತ್ತಿದ್ದ ಸಾರ್ವಜನಿಕರು ತುಂಬಾ ಜನಸಂದಣಿಯಿಂದ ತೊಂದರೆಗಳನ್ನು ಅನುಭವಿಸುವಂತಿತ್ತು.
ಈ ಎಲ್ಲಾ ಸಮಸ್ಯೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ಪೊಲೀಸ್ ಇಲಾಖೆ ಮತ್ತು ಮರಸಭೆ ಅಧಿಕಾರಿ ವರ್ಗದವರು ಕಾನೂನು ಮತ್ತು ನಾಗರೀಕರ ಹಿತದೃಷ್ಟಿಯಿಂದ ಆಕ್ರಮಿಸಿಕೊಂಡಿದ್ದ ಒತ್ತುವರಿ ಜಾಗಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾರ್ಯಚರಣೆ ಮಾಡಿ ತೆರವುಗೊಳಿಸಿದ ಇಲಾಖೆ ಅಧಿಕಾರಿ ವರ್ಗದವರನ್ನು ದ.ಸಂ.ಸ. ಅಭಿನಂದಿಸುತ್ತದೆ. ಅದರಂತೆ ಶೋಷಿತ ಬಡವರ್ಗದ ಬೀದಿ ಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯಾಪಾರ ಸ್ಥಳ ನೀಡಲು ಪುರಸಭೆ ಆಡಳಿತ ವರ್ಗದ ಬೇಜವಾಬ್ದಾರಿಯನ್ನು ಸಮಿತಿಯು ಖಂಡಿಸುತ್ತದೆ.
ವ್ಯಾಪಾರವನ್ನೇ ಆಶ್ರಯಿಸಿಕೊಂಡು ಸ್ವಾವಲಂಬಿಗಳಾಗಿ ಪುರಸಭೆಗೆ ತೆರಿಗೆ ಪಾವತಿಸಿ ಜೀವನ ಸಾಗಿಸುತ್ತಿದ್ದ ಕುಟುಂಬಗಳು ವ್ಯಾಪಾರವು ಇಲ್ಲದೆ ಮತ್ತು ಬ್ಯಾಂಕ್, ಫೈನಾನ್ಸ್, ಕೆಲ ವ್ಯಕ್ತಿಗಳಿಂದ ಬಡ್ಡಿಗೆ ಕೈ ಸಾಲ ಪಡೆದು ಸಾಲವನ್ನು ತೀರಿಸಲಾಗದೆ ಕುಟುಂಬ ಜೀವನ ನಿರ್ವಹಣೆ ಮಾಡಲಾಗದಂತ ಆರ್ಥಿಕ ತೊಂದರೆಗೆ ಸಿಲುಕಿ ಈ ಕುಟುಂಬಗಳು ಬೀದಿ ಪಾಲಾಗುವ ಕಾಲ ಸನ್ನಿಹಿತವಾಗುವಂತಹ ಸ್ಥಿತಿ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತದೆ.
ಆಕಸ್ಮಿಕವಾಗಿ ಸಾಲದ ಒತ್ತಡಕ್ಕೆ ಮನನೊಂದು ಸಾವು ನೋವು ಸಂಬಂಧಿಸಿದ್ದಲ್ಲಿ ಇದಕ್ಕೆ ಯಾರು ಹೊಣೆ? ಬಡವರ ಹಸಿವು, ನೋವು, ಕಷ್ಟ ಅರ್ಥೈಸಿಕೊಂಡು ಕಾಲ ವಿಳಂಬ ನೀತಿ ನಿರ್ಲಕ್ಷ್ಯತೆ ವಹಿಸುತ್ತ ಬಡವ ಮತ್ತು ಶ್ರೀಮಂತ ಎಂಬ ತಾರತಮ್ಯ ನೀತಿ ಅನುಸರಿಸುವುದನ್ನು ಸಮಿತಿಯು ಖಂಡಿಸುತ್ತದೆ. ಮನುಷ್ಯನ ಜೀವ-ಜೀವನ ಸ್ವಾಭಿಮಾನ ಸ್ವಾವಲಂಬಿ ಬದುಕು ಬಹಳ ದೊಡ್ಡದು. ಆದರಿಂದ ಕೂಡಲೇ ಪರ್ಯಾಯ ಸ್ಥಳ ವ್ಯವಸ್ಥೆ ಮಾಡಿಕೊಡಬೇಕು ಎಂದು ಹೇಳಿದರು.
ಈ ಸಂದರ್ಭ ಕೆಂಪಯ್ಯನ ಹುಂಡಿ ರಾಜು,ಗಿರೀಶ್, ಮರಿಸ್ವಾಮಿ ಕನ್ನಾಯಕನಹಳ್ಳಿ, ನೆರೆಗೆತನಹಳ್ಳಿ ಮನೋಜ್, ಕುಮಾರ ನಿಲಸೋಗೆ, ರಾಜಪ್ಪ ತೊಟ್ಟವಾಡಿ, ಪ್ರಭಾಕರ ಕೊಳ್ತೂರು, ವಿನಯ್ ಕುಮಾರ್, ಸ್ವಾಮಿ, ಪರಶುರಾಮ, ಅರ್ಜುನ್, ಕೇಶವಮೂರ್ತಿ ರವಿಕಾಂತ್ ಶಿವನಂಜು, ಗವಿಸಿದ್ದಯ್ಯ, ಜಯಣ್ಣ, ಕೃಷ್ಣ, ಮಲ್ಲೇಶ, ಪ್ರಸನ್ನ, ಮಾದೇವಸ್ವಾಮಿ ದಸಂಸ ಸೇರಿದಂತೆ ಪದಾಧಿಕಾರಿಗಳು ಇದ್ದರು.