ಮುಂಬೈ: ಶೇಷ ಭಾರತ (ರೆಸ್ಟ್ ಆಫ್ ಇಂಡಿಯಾ) ವಿರುದ್ಧದ ಇರಾನಿ ಟ್ರೋಫಿ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಮುಂಬಯಿ ಕ್ರಿಕೆಟ್ ಮಂಡಳಿ (ಎಂಸಿಎ) ತಿಳಿಸಿದೆ. ರಹಾನೆ ನಾಯಕತ್ವದಲ್ಲೇ ಮುಂಬೈ ಕಳೆದ ಸೀಸನ್ನಲ್ಲಿ ರಣಜಿ ಚಾಂಪಿಯನ್ ಆಗಿ ಮೂಡಿಬಂದಿತ್ತು.
ಶ್ರೇಯಸ್ ಅಯ್ಯರ್ ಮತ್ತು ಶಾರ್ದೂಲ್ ಠಾಕೂರ್ ಕೂಡ ಮುಂಬೈ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಂಗಳವಾರ ಮುಂಬೈ ತಂಡ ಪ್ರಕಟಗೊಳ್ಳಲಿದೆ.
ಜೂನ್ನಲ್ಲಿ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶಾರ್ದೂಲ್ ಠಾಕೂರ್, ಅನಂತರ ವಿಶ್ರಾಂತಿಯಲ್ಲಿದ್ದರು.
ತಾನೀಗ ಲಭ್ಯನಿದ್ದೇನೆಂದು ಸ್ವತಃ ಶಾರ್ದೂಲ್ ಠಾಕೂರ್ ಎಂಸಿಎಗೆ ತಿಳಿಸಿದ್ದರಿಂದ ಅವರನ್ನು ಇರಾನಿ ಟ್ರೋಫಿಯಲ್ಲಿ ಆಡಿಸುವ ನಿರ್ಧಾರಕ್ಕೆ ಬರಲಾಗಿದೆ. ಇರಾನಿ ಟ್ರೋಫಿ ಪಂದ್ಯ ಅ. ಒಂದರಿಂದ 5ರ ತನಕ ಲಕ್ನೋದಲ್ಲಿ ನಡೆಯಲಿದೆ.