ಕರ್ನಾಟಕ ರಾಜ್ಯ ಚಲನಚಿತ್ರ ವಸ್ತ್ರಾಲಂಕಾರ ಕಲಾವಿದರ ಸಂಘದ ನೂತನ ಕಛೇರಿಯನ್ನು ನಟಿ ರಾಗಿಣಿ ದ್ವಿವೇದಿ ಇತ್ತೀಚಿಗೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶಿವರಾಜ್, ಗೌರವಾಧ್ಯಕ್ಷರಾದ ರವಿಶಂಕರ್, ಸಂಘದ ಪದಾಧಿಕಾರಿಗಳು ಹಾಗೂ ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟದ ವಿವಿಧ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಲಾವಿದರು ಅಂದವಾಗಿ ಕಾಣಲು ಅವರು ಹಾಕುವ ಉಡುಗೆಯೇ ಕಾರಣ. ಅಂತಹ ವಸ್ತ್ರವನ್ನು ನಮಗೆ ಸರಿ ಹೊಂದುವ ಹಾಗೆ ಸಿದ್ದಪಡಿಸಿಕೊಡುವಲ್ಲಿ ವಸ್ತ್ರಾಲಂಕಾರ ಕಲಾವಿದರ ಪಾತ್ರ ದೊಡ್ಡದು. ಇಂದು ಅವರ ಸಂಘದ ಹೊಸ ಕಛೇರಿ ಉದ್ಘಾಟನೆ ಹಾಗೂ ಪೂಜಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಹಳ ಸಂತೋಷವಾಗಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ರಾಗಿಣಿ ದ್ವಿವೇದಿ ಹಾರೈಸಿದರು.
ಮೂವತ್ತೈದು ವರ್ಷಗಳ ಇತಿಹಾಸವಿರುವ ನಮ್ಮ ಸಂಘದ ಹೊಸ ಕಛೇರಿ ಉದ್ಘಾಟನೆ ಹಾಗೂ ಆಯುಧ ಪೂಜಾ ಸಮಾರಂಭಕ್ಕೆ ಆಗಮಿಸಿರುವ ರಾಗಿಣಿ ಅವರಿಗೆ ಹಾಗೂ ಎಲ್ಲಾ ಗಣ್ಯರಿಗೆ ಧನ್ಯವಾದ ತಿಳಿಸುತ್ತೇನೆ. ನಮ್ಮ ಸಂಘದಲ್ಲಿ 250 ಕ್ಕೂ ಅಧಿಕ ಜನ ಸದಸ್ಯರಿದ್ದಾರೆ. ಎಲ್ಲರ ಸಹಕಾರದಿಂದ ನಮ್ಮ ಸಂಘದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ.
ಜನವರಿಯಲ್ಲಿ ಸಂಘದ ಮೂವತ್ತೈದನೇ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಲಿದ್ದೇವೆ ಎಂದು ಕರ್ನಾಟಕ ರಾಜ್ಯ ಚಲನಚಿತ್ರ ವಸ್ತ್ರಾಲಂಕಾರ ಕಲಾವಿದರ ಸಂಘದ ಶಿವರಾಜ್ ತಿಳಿಸಿದರು. ಒಕ್ಕೂಟದ ಖಜಾಂಚಿ ಸೋಮು, ಹಿರಿಯ ನಿರ್ಮಾಣ ನಿರ್ವಾಹಕರಾದ ಪ್ರಕಾಶ್ ಮುಂತಾದವರು ಈ ಸಂದರ್ಭದಲ್ಲಿ ಮಾತನಾಡಿ ಶುಭ ಹಾರೈಸಿದರು.