ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಗೆ ಇನ್ನೂ ಸುಮಾರು ಒಂದು ವರ್ಷ ಬಾಕಿ ಇದೆ. ಅಷ್ಟರಲ್ಲೇ ರಾಜಕೀಯ ಪಕ್ಷಗಳಲ್ಲಿ ಈಗಾಗಲೇ ಅಲ್ಲೋಲ ಕಲ್ಲೋಲ ಆರಂಭವಾಗಿದೆ. ಇನ್ನು ಇದೀಗ ರಾಜಕೀಯಕ್ಕೆ ಕಾಲಿಟ್ಟಿರುವ ಪ್ರಶಾಂತ್ ಕಿಶೋರ್ ಅವರ ಜನ್ ಸೂರಜ್ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ. ಪಕ್ಷದ ಇಬ್ಬರು ಪ್ರಮುಖ ನಾಯಕರು ಕೋರ್ ಕಮಿಟಿಗೆ ರಾಜೀನಾಮೆ ನೀಡಿದ್ದಾರೆ.
ಕೇಂದ್ರದ ಮಾಜಿ ಸಚಿವ ದೇವೇಂದ್ರ ಪ್ರಸಾದ್ ಯಾದವ್ ಮತ್ತು ಮಾಜಿ ಸಂಸದ ಮೊನಜೀರ್ ಹಸನ್ ಜನ್ ಸುರಾಜ್ ಪಕ್ಷದ ರಾಜ್ಯ ಕೋರ್ ಕಮಿಟಿಗೆ ರಾಜೀನಾಮೆ ನೀಡಿದ್ದಾರೆ. ನಿಯಮಗಳ ಪ್ರಕಾರ, ಅವರು ತಮ್ಮ ರಾಜೀನಾಮೆ ಪತ್ರಗಳನ್ನು ಕಾರ್ಯಾಧ್ಯಕ್ಷ ಮನೋಜ್ ಭಾರ್ತಿ ಅವರಿಗೆ ಸಲ್ಲಿಸಬೇಕು, ಆದರೆ ಇಬ್ಬರೂ ತಮ್ಮ ರಾಜೀನಾಮೆ ಪತ್ರವನ್ನು ಪಕ್ಷದ ವರಿಷ್ಠ ಪ್ರಶಾಂತ್ ಕಿಶೋರ್ ಗೆ ಕಳುಹಿಸಿದ್ದಾರೆ.
ರಾಜೀನಾಮೆಗೆ ವೈಯಕ್ತಿಕ ಕಾರಣ ಎಂದು ಇಬ್ಬರೂ ಹೇಳಿಕೆ ನೀಡಿದ್ದಾರೆ. ಆದರೆ ಸಂಘಟನೆಯಲ್ಲಿನ ಪ್ರಭಾವ ಮತ್ತು ಪ್ರಾಬಲ್ಯದ ಹಿನ್ನೆಲೆಯಲ್ಲಿ ಆಂತರಿಕ ಚರ್ಚೆ ನಡೆಯುತ್ತಿದೆ. ಆದರೆ, ಸದ್ಯಕ್ಕೆ ಇಬ್ಬರೂ ಜನ್ ಸೂರಜ್ ಪಕ್ಷದಲ್ಲೇ ಉಳಿಯಲಿದ್ದಾರೆ. ಜನ್ ಸೂರಜ್ ಪಕ್ಷದ ಸಭೆಯಲ್ಲಿ 125 ಸದಸ್ಯರ ಕೋರ್ ಕಮಿಟಿಯನ್ನು 151 ಸದಸ್ಯರಿಗೆ ವಿಸ್ತರಿಸಲು ನಿರ್ಧರಿಸಲಾಗಿತ್ತು. ಕೋರ್ ಕಮಿಟಿಯ ನಿಷ್ಕ್ರಿಯ ಸದಸ್ಯರಿಂದ ರಾಜೀನಾಮೆ ಪಡೆಯುವುದರ ಬಗ್ಗೆಯೂ ಸಹ ಚರ್ಚಿಸಲಾಗಿದೆ. ಈ ಸಭೆ ಮತ್ತು ಚರ್ಚೆಯ ನಂತರವೇ ದೇವೇಂದ್ರ ಮತ್ತು ಮೊನಾಜಿರ್ ಕೋರ್ ಕಮಿಟಿಯಿಂದ ಹೊರಬಂದಿದ್ದಾರೆ.
ಈ ವರ್ಷದ ಅಕ್ಟೋಬರ್ 2ರಂದು ಜನ್ ಸೂರಜ್ ರಾಜಕೀಯ ಪಕ್ಷವಾಗಿ ರೂಪಾಂತರಗೊಳ್ಳುವುದಾಗಿ ಘೋಷಿಸುವಾಗ, ಪ್ರಶಾಂತ್ ಕಿಶೋರ್ ಇಬ್ಬರೂ ಸಂಘಟನೆಯ ಮೊದಲ ಶ್ರೇಣಿಯ ನಾಯಕರು ಎಂದು ಬಣ್ಣಿಸಿದ್ದರು. ಲೋಕಸಭೆ ಚುನಾವಣೆ ವೇಳೆಗೆ ದೇವೇಂದ್ರ ಆರ್ಜೆಡಿ ತೊರೆದು ಜನ್ ಸೂರಜ್ಗೆ ಸೇರ್ಪಡೆಯಾದರು. ಇನ್ನು ಜೆಡಿಯುನಿಂದ ಅಂತರ ಕಾಯ್ದುಕೊಂಡಿದ್ದ ಮೊನಾಜಿರ್ ಜನ್ ಸೂರಜ್ ಪಕ್ಷ ಸೇರಿದ್ದರು.