ನವದೆಹಲಿ: ರಾಷ್ಟ್ರ ರಾಜಧಾನಿಗೆ ಪಂಜಾಬ್ ರೈತರ ಮೆರವಣಿಗೆಗೆ ಮುನ್ನ ದೆಹಲಿ ಪೊಲೀಸರು ಇಂದು ಶುಕ್ರವಾರ ಗಡಿಭಾಗದಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ರೈತರು ಇಂದು ಮಧ್ಯಾಹ್ನ 1 ಗಂಟೆಗೆ ಶಂಭು ಬಾರ್ಡರ್ನಿಂದ ದೆಹಲಿಗೆ ತೆರಳಲು ಸಜ್ಜಾಗುತ್ತಿದ್ದಂತೆ ಪೊಲೀಸರು ಅಂಬಾಲಾ-ದೆಹಲಿ ಗಡಿಯಲ್ಲಿ ಬ್ಯಾರಿಕೇಡ್ ಹಾಕಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ದೆಹಲಿ ತಲುಪಲು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಬ್ಯಾನರ್ ಅಡಿಯಲ್ಲಿ ರೈತ ಗುಂಪುಗಳು ಮುತ್ತಿಗೆ ಹಾಕಲು ನಡೆಸಿದ ಎರಡು ಪ್ರಯತ್ನಗಳನ್ನು ಭದ್ರತಾ ಪಡೆಗಳು ತಡೆದ ನಂತರ ಇದು ಮೂರನೇ ಪ್ರಯತ್ನವಾಗಿದೆ.
ಅಂಬಾಲಾ ಆಡಳಿತವು ಬಿಎನ್ಎಸ್ಎಸ್ನ ಸೆಕ್ಷನ್ 163 ನ್ನು ವಿಧಿಸಿ ಐದಕ್ಕಿಂತ ಹೆಚ್ಚು ಜನರು ಒಂದು ಕಡೆ ಸೇರುವುದು, ಸಭೆ ನಡೆಸುವುದನ್ನು ನಿರ್ಬಂಧಿಸಲಾಗಿದೆ. ಶಂಭು ಗಡಿಯ ಸಮೀಪವಿರುವ ಪ್ರತಿಭಟನಾ ಸ್ಥಳದಲ್ಲಿ ನೊಟೀಸ್ ನೀಡಿದೆ.
ಅಂಬಾಲಾ ಅಧಿಕಾರಿಗಳು ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಮುಚ್ಚಲು ಆದೇಶಿಸಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಶುಕ್ರವಾರ ರಜೆ ಇರಲಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಅಂಬಲ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಶಂಭು ಗಡಿ ಬಿಂದು — ರಾಜಪುರ (ಪಂಜಾಬ್)-ಅಂಬಾಲ (ಹರಿಯಾಣ)– ರಾಷ್ಟ್ರೀಯ ಹೆದ್ದಾರಿ-44 ರಲ್ಲಿ ಬಹುಪದರದ ಬ್ಯಾರಿಕೇಡಿಂಗ್ ಈಗಾಗಲೇ ಜಾರಿಯಲ್ಲಿದೆ. ಶಂಭು ಗಡಿಯಲ್ಲೂ ಜಲಫಿರಂಗಿಗಳನ್ನು ನಿಯೋಜಿಸಲಾಗಿದೆ.
ಮೆರವಣಿಗೆಯನ್ನು ಶಾಂತಿಯುತ ರೀತಿಯಲ್ಲಿ ನಡೆಸಲಾಗುವುದು ಎಂದು ಹೇಳಿದ ಪಂಧೇರ್, ಹರ್ಯಾಣ ಆಡಳಿತವು ಪಾದಯಾತ್ರೆಯನ್ನು ನಿಷೇಧಿಸಿರುವುದನ್ನು ಟೀಕಿಸಿದರು. ರೈತರ ಮೆರವಣಿಗೆ 297ನೇ ದಿನಕ್ಕೆ ಕಾಲಿಟ್ಟಿದ್ದು, ಖಾನೌರಿ ಗಡಿಯಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ 11ನೇ ದಿನಕ್ಕೆ ಕಾಲಿಟ್ಟಿದೆ. ಮಧ್ಯಾಹ್ನ 1 ಗಂಟೆಗೆ 101 ರೈತರ ಜಾಥಾ ಶಂಭು ಗಡಿಯಿಂದ ದೆಹಲಿಯತ್ತ ಸಾಗಲಿದೆ ಎಂದು ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ರೈತರು ತಮ್ಮ ಟ್ರ್ಯಾಕ್ಟರ್-ಟ್ರೇಲರ್ಗಳಲ್ಲಿ ತರಕಾರಿಗಳು, ಹಿಟ್ಟಿನ ಚೀಲಗಳು, ಉದ್ದು ಮತ್ತು ಅಡುಗೆ ಎಣ್ಣೆಯನ್ನು ತಂದಿದ್ದಾರೆ. ಪ್ರತಿಭಟನಾ ನಿರತ ರೈತರು, ಪುರುಷರು ಮತ್ತು ಮಹಿಳೆಯರು – ಯುವಕರು ಮತ್ತು ಹಿರಿಯರು – ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು, ಟ್ರ್ಯಾಕ್ಟರ್-ಟ್ರೇಲರ್ ಗಳು, ಕಾರುಗಳು ಮತ್ತು ಮೋಟಾರ್ ಸೈಕಲ್ ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಪ್ರತಿಭಟನಾಕಾರರಿಗೆ ಆಹಾರ ನೀಡಲು ಟೆಂಟ್ಗಳು ಮತ್ತು ತಾತ್ಕಾಲಿಕ ಅಡಿಗೆಮನೆಗಳನ್ನು ಸ್ಥಾಪಿಸಿದ್ದಾರೆ.
ಫೆಬ್ರವರಿ 13 ರಿಂದ ರೈತರು ಶಂಭು ಮತ್ತು ಖಾನೌರಿ ಗಡಿ ಬಿಂದುಗಳ ಗಡಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (MSP) ಕಾನೂನು ಖಾತರಿಯನ್ನು ಕೋರುತ್ತಿದ್ದಾರೆ, ಸಾಲ ಮನ್ನಾ, ರೈತರು ಮತ್ತು ಕೃಷಿಗೆ ಪಿಂಚಣಿ ಸೇರಿದಂತೆ ಇತರ ಬೇಡಿಕೆಗಳಿವೆ. 2021 ರ ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ “ನ್ಯಾಯ”, 2013 ರ ಭೂ ಸ್ವಾಧೀನ ಕಾಯಿದೆಯ ಮರುಸ್ಥಾಪನೆ ಮತ್ತು 2020-21 ರಲ್ಲಿ ಹಿಂದಿನ ಆಂದೋಲನದ ಸಮಯದಲ್ಲಿ ರೈತರ ಕುಟುಂಬಗಳಿಗೆ ಪರಿಹಾರವನ್ನು ಸಹ ರೈತರು ಬೇಡಿಕೆಯಿಟ್ಟಿದ್ದರು.
ರೈತರು ಈ ಹಿಂದೆ ಫೆಬ್ರವರಿ 13 ಮತ್ತು ಫೆಬ್ರವರಿ 21 ರಂದು ರಾಷ್ಟ್ರ ರಾಜಧಾನಿಗೆ ಮೆರವಣಿಗೆ ನಡೆಸಲು ಪ್ರಯತ್ನಿಸಿದ್ದರು, ಆದರೆ ಅವರನ್ನು ಪಂಜಾಬ್-ಹರಿಯಾಣ ಗಡಿಯಲ್ಲಿರುವ ಶಂಭು ಮತ್ತು ಖಾನೌರಿ ಗಡಿಯಲ್ಲಿ ಭದ್ರತಾ ಪಡೆಗಳು ತಡೆದಿದ್ದರು.