ಬೆಂಗಳೂರು: ಡಿಸೆಂಬರ್ 19 ರ ಬೆಳಗಾವಿ ಅಧಿವೇಶನದ ಕಲಾಪದಲ್ಲಿ ಆಡಳಿತ ಪಕ್ಷ ಪ್ರತಿಪಕ್ಷಗಳ ನಡುವೆ ವಾಗ್ಯುದ್ಧ ತಾರಕಕ್ಕೇರುತ್ತಿದ್ದಂತೆ, ಎದ್ದು ನಿಂತಿದ್ದ ಸಿಟಿ ರವಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಪರಸ್ಪರ ಬೈದಾಡಿಕೊಂಡಿದ್ದರು. ಸದನದಲ್ಲೇ ರವಿ ಅಶ್ಲೀಲ ಪದ ಬಳಸಿ ನಿಂದಿಸಿದ್ದಾರೆಂದು ಆರೋಪಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣವನ್ನೂ ದಾಖಲಿಸಿದ್ದರು. ಪ್ರಕರಣದ ಹಿನ್ನೆಲೆ ಹಿರೇಬಾಗೇವಾಡಿ ಪೊಲೀಸರು ರವಿಯನ್ನ ಬಂಧಿಸಿದ್ದೂ ಆಯ್ತು, ಕೋರ್ಟ್ ಸೂಚನೆ ಮೇರೆಗೆ ರಿಲೀಸ್ ಮಾಡಿದ್ದೂ ಆಯ್ತು.
ಇದೀಗ ಪ್ರಕರಣ ರಾಜ್ಯಪಾಲರವರೆಗೂ ತಲುಪಿದೆ. ಪ್ರಕರಣದ ಹಿನ್ನೆಲೆ ಬಿಜೆಪಿ ನಿಯೋಗ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ಗೆ ದೂರು ನೀಡಿತ್ತು. ಈ ಹಿನ್ನೆಲೆ ರಾಜ್ಯಪಾಲರು ಸಿ.ಟಿ.ರವಿಗೆ ಬುಲಾವ್ ನೀಡಿದ್ದರು. ಸದ್ಯ ಸಿಟಿ ರವಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ರನ್ನ ಭೇಟಿಯಾಗಿ ಜಟಾಪಟಿಯ ಕುರಿತು ಮಾಹಿತಿ ನೀಡಿದ್ದು, ಪ್ರಕರಣದ ದಿಕ್ಕು ತಪ್ಪಿಸುತ್ತಿರುವ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇನ್ನು ಈಗಾಗಲೇ ಅಂದರೆ, ಡಿಸೆಂಬರ್ 25ರಂದೇ ಎರಡೂ ಪ್ರಕರಣಗಳು ಸಿಐಡಿಗೆ ವರ್ಗಾವಣೆಯಾಗಿದೆ. ಆದರೂ ಇದುವರೆಗೂ ಸಿಐಡಿ ತಂಡ ಬೆಳಗಾವಿಗೆ ಭೇಟಿ ನೀಡಿಲ್ಲ. ಸದ್ಯದಲ್ಲೇ ಸಿಐಡಿ ಟೀಂ ಬೆಳಗಾವಿಗೆ ತಲುಪಲಿದೆ. ಆದರೆ ಸಿಐಡಿಗೆ ಇಲ್ಲೊಂದು ಸವಾಲು ಎದುರಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ದೂರಿನನ್ವಯ ಸ್ಥಳ ಮಹಜರು ನಡೆಸಬೇಕಾದರೆ ಸುವರ್ಣಸೌಧಕ್ಕೆ ಕಾಲಿಡಬೇಕು. ಆದರೆ, ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಸ್ಥಳ ಮಹಜರಿಗೆ ಅವಕಾಶ ಕೊಡಲ್ಲ ಅಂತ ಖಡಾಖಂಡಿತವಾಗಿ ನುಡಿದಿದ್ದಾರೆ. ಹೀಗಾಗಿ ಸಿಐಡಿ ಮುಂದಿನ ಯೋಜನೆ ಏನು ಎಂಬುದು ಇನ್ನೂ ಗೌಪ್ಯವಾಗಿಯೇ ಇದೆ.
ಪರಿಷತ್ ಸಭಾಪತಿ ನಿರ್ಧಾರದ ಬಗ್ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿ, ಆ ಬಗ್ಗೆ ಹೇಳಿಕೆ ಕೊಡಲ್ಲ ಅಂದಿದ್ದಾರೆ. ಸುವರ್ಣಸೌಧದಲ್ಲಿನ ಗಲಾಟೆ ಬಗ್ಗೆ ಮಾತ್ರ ಸಿಐಡಿ ತನಿಖೆ ಪ್ರಾರಂಭಿಸಿದ್ದು, ಅವರ ಕೆಲಸ ಮಾಡುತ್ತಾರೆ. ತನಿಖೆ ಆಗಲಿ ವರದಿ ಬಂದಾಗ ಎಲ್ಲವನ್ನೂ ಹೇಳುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಡಿ.22 ರಂದು ಸಿ.ಟಿ.ರವಿ ಮೇಲೆ ಹಲ್ಲೆ ಸಂಬಂಧ ಅಪರಿಚಿತರ ವಿರುದ್ಧ ದೂರು ದಾಖಲಾಗಿತ್ತು. ಹಿರೇಬಾಗೇವಾಡಿ ಪೊಲೀಸರು ಖುದ್ದು ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡಿದ್ದರು. ಆದರೆ, ದೂರು ದಾಖಲಾಗಿ 8 ದಿನಗಳಾದರೂ ಇನ್ನೂ ಆರೋಪಿಗಳು ಮಾತ್ರ ಪತ್ತೆಯಾಗಿಲ್ಲ. ಇದರಿಂದ ಸಿಡಿದಿರುವ ಪರಿಷತ್ ಸದಸ್ಯ ಸಿ.ಟಿ.ರವಿ, ಯಾಕೆ ಗೂಂಡಾಗಳನ್ನ ಇದುವರೆಗೂ ಬಂಧಿಸಿಲ್ಲ. ನಾನು ಕೊಟ್ಟಿರುವ ದೂರಿನಲ್ಲಿ ಹೆಸರು ದಾಖಲಿಸಿದ್ದರೂ ಅಪರಿಚಿತರು ಎಂದು ನಮೂದಿಸಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.