ಜೈಪುರ: ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ಕಾರು ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಭೀಕರ ಅಪಘಾತದಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನ ಮುಂಭಾಗ ಬಸ್ಸಿನಡಿ ಸಿಲುಕಿಕೊಂಡಿದೆ.
ಮಂಗಳವಾರ ರಾತ್ರಿ ಕುಡಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯ ಸೇಲಂಪುರ-ಕುಡ್ಗಾಂವ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಕೈಲಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ, ವಾಪಸ್ ಗಂಗಾಪುರ ನಗರದ ಕಡೆಗೆ ಹೋಗುತ್ತಿದ್ದರು ಎಂದು ಕರೌಲಿ ಪೊಲೀಸ್ ವರಿಷ್ಠಾಧಿಕಾರಿ ಬ್ರಿಜೇಶ್ ಜ್ಯೋತಿ ಉಪಾಧ್ಯಾಯ ಅವರು ತಿಳಿಸಿದ್ದಾರೆ.
ಕಾರಿನಲ್ಲಿದ್ದ ಐವರು, ನಯನ್ ದೇಶಮುಖ್(60), ಅವರ ಸಹೋದರಿ ಪ್ರೀತಿ ಭಟ್(60), ಅವರ ಮಗ ಖುಷ್ ದೇಶಮುಖ್(22), ಅವರ ಮಗಳು ಮನಸ್ವಿ(25) ಮತ್ತು ಸಂಬಂಧಿ ಅನಿತಾ(55) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಎಸ್ಪಿ ಹೇಳಿದ್ದಾರೆ.
ಸಂತ್ರಸ್ತರು ಮಧ್ಯಪ್ರದೇಶದ ಇಂದೋರ್ ನಿವಾಸಿಗಳು ಎಂದು ಕುಡ್ಗಾಂವ್ ಸ್ಟೇಷನ್ ಹೌಸ್ ಆಫೀಸರ್ ರುಕ್ಮಣಿ ಗುರ್ಜರ್ ಅವರು ತಿಳಿಸಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಕಳುಹಿಸಲಾಗಿದೆ. ಅವರ ಕುಟುಂಬ ಸದಸ್ಯರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.