ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾಯುಕ್ತ ವಿಚಾರಣೆ ಎದುರಿಸಲು ಮೈಸೂರಿಗೆ ಆಗಮಿಸಿದ ವೇಳೆ ಬಿಜೆಪಿ ಮುಖಂಡರು,ಕಾರ್ಯಕರ್ತರು ತೀವ್ರ ಪ್ರತಿಭಟನೆ ಮಾಡಿದ್ದಾರೆ.
ಪ್ರತಿಭಟನಾಕಾರರು ಖಾಸಗಿ ವಾಹನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಬಂದು ಮುಖ್ಯಮಂತ್ರಿಯವರು ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.
ಈ ಹಂತದಲ್ಲಿ ಪೊಲೀಸರು ಖಾಸಗಿ ವಾಹನದಲ್ಲಿ ಬಂದಿದ್ದ ಪ್ರತಿಭಟನಾಕಾರರನ್ನು ವಾಹನ ಸಮೇತ ವಶಕ್ಕೆ ಪಡೆದು ಅಲ್ಲಿಂದ ಕರೆದೊಯ್ದರು. ಈವೇಳೆ ಪೊಲೀಸರು ಮತ್ತು ಪ್ರತಿಭಟನಾ ಕಾರರ ನಡುವೆ ತಳ್ಳಾಟ ನೂಕಾಟ ನಡೆದು ಪೊಲೀಸರು ಸರ್ಕಾರದ ಅಣತಿಯಂತೆ ಕರ್ತವ್ಯ ನಿರ್ವಹಿಸಿ ಕಾನೂನು ಕೈಗೆತ್ತಿಕೊಂಡು ದೌರ್ಜನ್ಯವೆಸಗುತ್ತಿದ್ದಾರೆ ಎಂದು ದೂರಲಾಯಿತು. ಇದೇ ವೇಳೆ ಮಹಿಳಾ ಪ್ರತಿಭಟನಾಕಾರರನ್ನು ಪೊಲೀಸರು ಪ್ರತ್ಯೇಕ ವಾಹನಕ್ಕೆ ತುಂಬಿ ಅಲ್ಲಿಂದ ಕರೆದೊಯ್ದರು.
ಶಾಸಕ ಶ್ರೀವತ್ಸ ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.