ಬೆಂಗಳೂರು: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್(ನಬಾರ್ಡ್))ನಿಂದ ಈ ವರ್ಷ ರಾಜ್ಯಕ್ಕೆ ಸಾಲದ ಮೊತ್ತವನ್ನು “ಕಡಿತ” ಮಾಡಿದ ಕುರಿತು ಚರ್ಚಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಭೇಟಿಗೆ ಅಪಾಯಿಂಟ್ಮೆಂಟ್ ಕೇಳಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ರಾತ್ರಿ ರಾಷ್ಟ್ರ ರಾಜಧಾನಿಗೆ ಪ್ರಯಾಣ ಬೆಳೆಸಲಿದ್ದು, ನಾಳೆ ದೆಹಲಿಯಲ್ಲಿ ನಂದಿನಿ ಉತ್ಪನ್ನಗಳನ್ನು ಬಿಡುಗಡೆ ಮಾಡಲಿದ್ದಾರೆ.
ನಾನು ದೆಹಲಿಗೆ ಹೋಗುತ್ತಿದ್ದೇನೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಭೇಟಿಗೆ ಅಪಾಯಿಂಟ್ಮೆಂಟ್ ಕೇಳಿದ್ದೇನೆ. ಏಕೆಂದರೆ ಈ ವರ್ಷ ರಾಜ್ಯಕ್ಕೆ ನಬಾರ್ಡ್ ಸಾಲ ಕಡಿಮೆಯಾಗಿದೆ. ಕಳೆದ ವರ್ಷ 5,600 ಕೋಟಿ ರೂ. ಇತ್ತು. ಈ ವರ್ಷ 2,340 ಕೋಟಿ ರೂ.ಗೆ ಅಂದರೆ ಶೇ. 58 ರಷ್ಟು ಕಡಿಮೆಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಬಾರ್ಡ್ ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಹೀಗಾಗಿ ನಾನು ಹಣಕಾಸು ಸಚಿವರನ್ನು ಭೇಟಿ ಮಾಡಿ ನಬಾರ್ಡ್ ಸಾಲದ ಮೊತ್ತ ಕಡಿತಗೊಳಿಸದಂತೆ ಅವರಿಗೆ ವಿನಂತಿ ಮಾಡುತ್ತೇನೆ” ಎಂದರು.
ದೆಹಲಿ ಭೇಟಿ ವೇಳೆ ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, “ನಾಳೆ ಸಂಜೆಯೊಳಗೆ ರಾಜ್ಯಕ್ಕೆ ಮರಳಬೇಕು, ಸಮಯ ಸಿಕ್ಕರೆ ಭೇಟಿಯಾಗುತ್ತೇನೆ” ಎಂದರು.