ಬಳ್ಳಾರಿ: ಬೆಂಗಳೂರಿನಲ್ಲಿ 6 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ರಾಜ್ಯವನ್ನು ತಲ್ಲಣಗೊಳಿಸಿತ್ತು. ಈ ಘಟನೆ ಮಾಸುವ ಮುನ್ನವೇ ಬಳ್ಳಾರಿಯಲ್ಲೂ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಪೈಶಾಚಿಕ ಘಟನೆ ವರದಿಯಾಗಿದೆ.
ಬಳ್ಳಾರಿಯ ತೋರಣಗಲ್ ನಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಐದು ವರ್ಷದ ಬಾಲಕಿಯನ್ನು ಪುಸುಲಾಯಿಸಿ ಕರೆದೊಯ್ದ ದುಷ್ಕರ್ಮಿಯೊಬ್ಬ ಅತ್ಯಾಚಾರ ಎಸಗಿದ್ದಾನೆ. ಆರೋಪಿಯ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತೋರಣಗಲ್ ಠಾಣೆ ಪೊಲೀಸರು ಈ ಸಂಬಂಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ.
ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ದಂಪತಿಯ ಮಗುವಿನ ಮೇಲೆ ದುಷ್ಕರ್ಮಿ ಅತ್ಯಾಚಾರ ಎಸಗಿದ್ದಾನೆ. ಲೈಂಗಿಕ ದಾಳಿಯಿಂದ ಮಗುವಿಗೆ ಆಂತರಿಕ ಗಾಯಗಳಾಗಿದ್ದು ತೀವ್ರ ರಕ್ತಸ್ರಾವ ಉಂಟಾಗಿದೆ. ಮಗುವಿನ ಪರಿಸ್ಥಿತಿ ನೋಡಿದ ಪೋಷಕರು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆ ವೇಳೆ ಮಗುವಿನ ಮೇಲೆ ಅತ್ಯಾಚಾರ ನಡೆದಿರುವುದು ಧೃಡಪಟ್ಟಿದೆ. ಪ್ರಸ್ತುತ ಮಗುವಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದೆ.
ಮಗುವಿನ ಮೇಲಿನ ಪೈಶಾಚಿಕ ಕೃತ್ಯವನ್ನು ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು. ಆರೋಪಿಗೆ ತಕ್ಕ ಪಾಠ ಕಲಿಸುವಂತೆ ಜಿಲ್ಲಾಧಿಕಾರಿಗೆ ಮಹಿಳೆಯರು ಮನವಿ ಮಾಡಿದ್ದು, ಅತ್ಯಾಚಾರ ಪ್ರಕರಣ ನಿಯಂತ್ರಣಕ್ಕೆ ಸೂಕ್ತ ಕಾನೂನು ರೂಪಿಸುವಂತೆ ಆಗ್ರಹಿಸಿದ್ದಾರೆ.