ಮೈಸೂರು: ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಸರ್ಕಾರ ಶ್ವೇತಪತ್ರ ಹೊರಡಿಸಲಿ ಎಂದು ಬಿಜೆಪಿ ಎಂಎಲ್ಸಿ ಎ ಹೆಚ್ ವಿಶ್ವನಾಥ್ ಅವರು ಆಗ್ರಹಿಸಿದ್ದಾರೆ,
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 5 ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಹಣಕಾಸಿನ ಸ್ಥಿತಿ ಅಧೋಗತಿಗೆ ತಲುಪಿದೆ. ರಾಜ್ಯದ ಹಣಕಾಸಿನ ಪರಿಸ್ಥಿತಿ ಮುಗ್ಗುರಿಸಿಬಿದ್ದಿದೆ. ವಿರೋಧಪಕ್ಷದ ಸ್ಥಾದಲ್ಲಿರುವ ಬಿಜೆಪಿ ನಾಯಕರು ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಆರ್ಥಿಕ ತಜ್ಞ ಮೋಹನ್ ದಾಸ್ ಪೈ ಕೂಡ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿರುವ ಬಗ್ಗೆ ಆತಂಕದಿಂದ ಮಾತನಾಡಿದ್ದಾರೆ. ಆರ್ಥಿಕ ಬಿಕ್ಕಟ್ಟು ಸರ್ಕಾರದ ಕುತ್ತಿಗೆ ಹಿಸುಕುತ್ತಿದೆ ಎಂದು ಹೇಳಿದರು.
ಸಾರಿಗೆ ಇಲಾಖೆಯ ನಾಲ್ಕು ನಿಗಮಗಳಿಗೆ2 ಸಾವಿರ ಕೋಟಿ ರೂ. ಸಾಲ ಪಡೆಯಲು ರಾಜ್ಯಸರ್ಕಾರ ಒಪ್ಪಿಗೆ ನೀಡಿದೆ. ಸಾಲ ಮರುಪಾವತಿಸಲು ಪರದಾಡುತ್ತಿರುವ ಕಾರಣ ಸಾಲ ಮಂಜೂರಾಗಲಿದೆಯೇ ಅಥವಾ ಇಲ್ಲವೇ ನೋಡಬೇಕು. ಶೇ.18ರಷ್ಟು ಬಡ್ಡಿ ಕಟ್ಟಬೇಕಿದೆ. ಸಿದ್ದರಾಮಯ್ಯ ಅವರ ಕೊಡುಗೆಗಳಿಂದ ರಾಜ್ಯ ಅಧೋಗತಿಗೆ ಬಂದಿದೆ’ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಳ್ಳು ಭಾಷಣಗಳ ರಾಜ, ಖಾತರಿ ಯೋಜನೆಗಳನ್ನು ಜಾರಿಗೆ ತಂದ ನಂತರ ಹಣಕಾಸು ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ. ಸಿದ್ದರಾಮಯ್ಯ ಅವರು 16ನೇ ಬಜೆಟ್ ಮಂಡನೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ಕಳೆದ ವರ್ಷ ಏನು ಬದಲಾವಣೆ ಮಾಡಿದ್ದಾರೆ, ಏನಾದರೂ ಸುಧಾರಣೆ ತಂದಿದ್ದಾರೆಯೇ? ಹೊಸತನದಿಂದ ಆದಾಯ ತಂದಿದ್ದಾರೆಯೇ? ಹಣಕಾಸು ಸ್ಥಿತಿ ಬಗ್ಗೆ ಜನರ ಮುಂದೆ ಸತ್ಯಹೇಳಬೇಕೇ ಹೊರತು ಮುಚ್ಚಿಟ್ಟುಕೊಳ್ಳಬಾರದು ಎಂದು ತಿಳಿಸಿದರು.
ಮುಖ್ಯಮಂತ್ರಿಗೆ ಅಧಿಕಾರಿಗಳ ಮೇಲೆ ಹಿಡಿತ ತಪ್ಪಿದೆ. ಅಧಿಕಾರಿಗಳಾದ ರೋಹಿಣಿ ಸಿಂಧೂರಿ ಹಾಗೂ ರೂಪಾ ಬೀದಿ ಜಗಳ ಮಾಡಿಕೊಂಡಿದ್ದರೂ ಅವರ ಮೇಲೆ ಶಿಸ್ತು ಕ್ರಮಜರುಗಿಸಿಲ್ಲವೇಕೆ? ಕೇಂದ್ರ ಸೇವೆಗೆ ವಾಪಸ್ ಕಳುಹಿಸದೆ ಇಲ್ಲೇಕೆ ಇರಿಸಿಕೊಳ್ಳಲಾಗಿದೆ? ಆಡಳಿತದಲ್ಲಿ ಬಿಗಿಯಾದ ಕ್ರಮಗಳನ್ನು ಕೈಗೊಳ್ಳದೇ ಇರುವುದಕ್ಕೆ ಇದಕ್ಕೆ ಕಾರಣವಾಗಿದೆ ಎಂದು ದೂರಿದರು.
ಇದೇ ವೇಳೆ ಪ್ರಿನ್ಸಸ್ ರಸ್ತೆ ಹೆಸರು ಬದಲಾವಣೆ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಪ್ರಿನ್ಸಸ್ ಅಂತ ಏನಿದೆ ಅದೇ ಹೆಸರು ಇರಲಿ. ಅದಕ್ಕೆ ಎಲ್ಲಾ ರೀತಿಯ ದಾಖಲೆಗಳಿವೆ. ಅದನ್ನ ಬಿಟ್ಟು ನಿಮ್ಮ ಹೆಸರನ್ನ ಇಡಲಿಕ್ಕೆ ಹೋಗಿ. ನಿಮ್ಮ ಬೆಂಬಲಿಗರು ನಿಮ್ಮ ಹೆಸರನ್ನ ಕೆಡಿಸಲಿಕ್ಕೆ ಹೊರಟಿದ್ದಾರೆ. ಇದು ಬೇಡ ಸಿದ್ದರಾಮಯ್ಯನವರೇ. ನಿಮಗೆ ಜನ ಎಲ್ಲ ರೀತಿಯ ಅಧಿಕಾರ ಕೊಟ್ಟಿದ್ದಾರೆ, ಎಲ್ಲವನ್ನೂ ಅನುಭವಿಸಿದ್ದೀರಿ. ಈಗ ಈ ವಿಚಾರ ಇಲ್ಲಿಗೆ ಬಿಡಿ ಎಂದರು,
ಮುಡಾ ಪ್ರಕರಣದಲ್ಲಿ ನಿಮ್ಮ ಹೆಸರು ಹಾಳು ಮಾಡಿದ್ದರಿಂದ ಒಮ್ಮೆ ನೊಂದಿದ್ದೀರಾ. 50:50 ಅನುಪಾತ ಹೆಸರಿನಲ್ಲಿ ಭೂಮಿ ನುಂಗಿದರಿಂದಲೇ ನಿಮ್ಮ ಹೆಸರು ಕೆಟ್ಟಿತು. ಈಗ ಮತ್ತೆ ಅಂತಹವರ ಮಾತು ಕೇಳಬೇಡಿ. ಸಿಐಟಿಬಿ ನಕ್ಷೆಯಲ್ಲಿ ಪ್ರಿನ್ಸಸ್ ರಸ್ತೆ ಎನ್ನುವುದನ್ನು ಜಿಲ್ಲಾಡಳಿತ ದಾಖಲೆಯಲ್ಲೇ ಇದೆ. ಭಟ್ಟಂಗಿಗಳು ಹೇಳುವ ಮಾತನ್ನು ಕೇಳದೆ ಅಧಿಕಾರಿಗಳನ್ನು ಕೂರಿಸಿಕೊಂಡ ಮಾಹಿತಿ ಪಡೆದುಈ ವಿಚಾರಕ್ಕೆ ತೆರೆ ಎಳೆಯಿರಿಎಂದು ಸಲಹೆ ನೀಡಿದರು.
ಕೆಲ ಕಾಂಗ್ರೆಸ್ ಮುಖಂಡರು, ವಕ್ತಾರರು ಯದುವೀರ್ ಬಗ್ಗೆ ಅಗೌರವದಿಂದ ಮಾತನಾಡಿದ್ದಾರೆ. ನಿಮಗೆ ಇತಿಹಾಸ ಗೊತ್ತಿಲ್ಲದಿದ್ದರೆ ಸುಮ್ಮನೆ ಇರಬೇಕೆ ಹೊರತು ಬಾಯಿಗೆ ಬಂದಂತೆ ಏನೇನೋ ಮಾತನಾಡಬಾರದು. ಯದುವಂಶದ ಬಗ್ಗೆ ಮಾತನಾಡಿ ಸಣ್ಣವರಾಗುವುದು ನೀವೇ ಎಂದು ಕಿಡಿಕಾರಿದರು.
ಚಳಿಗಾಲದ ಅಧಿವೇಶನವೂ ಕೂಡ ಕೆಟ್ಟದಾಗಿ ಮುಗಿದಿದೆ. ವಿಧಾನ ಮಂಡಲದ ಸಂಪ್ರದಾಯ ಮುರಿಯುವಂತಹ ಕೆಲಸವೇ ಆಗಿದೆ. ಸಭಾಪತಿ ಬಸವರಾಜ ಹೊರಟ್ಟಿ ಎಲ್ಲಾ ಮುಗಿದ ಅಧ್ಯಾಯ ಎಂದಿದ್ದಾರೆ. ಆದರೂ ಪೊಲೀಸರು ಮಹಜರು ಮಾಡುವುದು ಸರಿಯಲ್ಲ. ಸಿ.ಟಿ ರವಿ ಬಂಧನ ಮಾಡಿದ್ದು ಕೂಡ ಸರಿಯಲ್ಲ. ಬೆಳಗಾವಿ ಅಧಿವೇಶನ ಕೆಟ್ಟ ರೀತಿಯಲ್ಲಿ ಅಂತ್ಯವಾಯಿತು. ರಾಜ್ಯದ ಆಡಳಿತ, ಅಭಿವೃದ್ಧಿ ಬಗ್ಗೆ ಯಾರು ಕೂಡ ತಲೆ ಕೆಡಿಸಿಕೊಳ್ಳುತ್ತಿಲ್ಲ. ರಾಜ್ಯದ ಪರಿಸ್ಥಿತಿ ಅಧೋಗತಿಯಾಗುತ್ತಿದೆ. ಇನ್ನು ಮುಂದಾದರೂ ಈ ಬಗ್ಗೆ ಮುಖ್ಯಮಂತ್ರಿ ಗಮನ ಹರಿಸಬೇಕು ಎಂದು ತಿಳಿಸಿದರು.
ಇದೇ ತಿಂಗಳು ಜನವರಿ 7 ರಂದು ಅಮಿತ್ ಶಾ ಹೇಳಿಕೆ ಕುರಿತು ಮೈಸೂರು ಬಂದ್ಗೆ ಕರೆ ನೀಡಲಾಗಿದ್ದು, ಇದಕ್ಕೆ ನನ್ನ ಬೆಂಬಲ ಇದೆ ಎಂದರು.
ಕ್ಯಾನ್ಸರ್ ಗೆ ಯಶಸ್ವಿ ಚಿಕಿತ್ಸೆ ಪಡೆದಿರುವ ನಟ ಶಿವರಾಜ್ ಕುಮಾರ್ ಅವರ ಆರೋಗ್ಯ ಬೇಗ ಚೇತರಿಸಿಕೊಳ್ಳಲಿ ಎಂದು ಇದೇ ಸಂದರ್ಭದಲ್ಲಿ ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.