ಬಂಗಾರಪೇಟೆ: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ರಥಯಾತ್ರೆಗೆ ತಾಲ್ಲೂಕಿನ ಗಡಿ ಭಾಗದಲ್ಲಿ ಹಂಚಾಳದ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಶಾಲಾ ಮಕ್ಕಳು ಹಾಗೂ ಶಾಸಕ ಎಸ್.ಎನ್. ನಾರಾಯಣಸ್ವಾಮಿ ರವರು ತಾಯಿ ಭುವನೇಶ್ವರಿ ದೇವಿಗೆ ಪುಷ್ಪ ನಮನವನ್ನು ಸಲ್ಲಿಸುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು.
ನಂತರ ಪಟ್ಟಣದ ಅಂಬೇಡ್ಕರ್ ಪುತ್ತಳಿ ಬಳಿ ಕನ್ನಡ ರಥಯಾತ್ರೆ ಆಗಮಿಸಿತು. ಪುರಸಭೆ ವತಿಯಿಂದ ಹಾಗೂ ತಾಲ್ಲೂಕು ಆಡಳಿತ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಿ ಪುಷ್ಪ ನಮನವನ್ನು ನೆರವೇರಿಸಿದರು. ಮೆರವಣಿಗೆಯಲ್ಲಿ ವೀರಗಾಸೆ ತಂಡಗಳ ಆಕರ್ಷಕ ನೃತ್ಯ ಮೆರುಗು ನೀಡಿತ್ತು.ಈ ವೇಳೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮಾತನಾಡಿ, ಒಂದು ತಿಂಗಳ ಹಿಂದೆ ಪ್ರಾರಂಭವಾಗಿರುವ ಕನ್ನಡ ತಾಯಿಯ ಭುವನೇಶ್ವರಿ ದೇವಿ ರಥಯಾತ್ರೆ ಈ ದಿನ ಬಂಗಾರಪೇಟೆಗೆ ಆಗಮಿಸಿದೆ. ನಾವೆಲ್ಲರೂ ಸಹ ಅದ್ದೂರಿಯಾಗಿ ತಾಯಿ ಭುವನೇಶ್ವರಿಯ ರಥಯಾತ್ರೆಯನ್ನು ಗಡಿನಾಡು ಭಾಗಕ್ಕೆ ಸ್ವಾಗತಿಸಿದ್ದೇವೆ. ಬಹಳ ವರ್ಷಗಳ ನಂತರ ನವಂಬರ್ ನಲ್ಲಿ ಕನ್ನಡ ರಥಯಾತ್ರೆ ಬಂದಿರುವುದು ಬಹಳ ಸಂತೋಷವಾಗಿದೆ.
ಈಗಾಗಲೇ ನಾವು ಕನ್ನಡ ಭವನವನ್ನು ಸಹ ಪಟ್ಟಣದಲ್ಲಿ ನಿರ್ಮಿಸಬೇಕು ಎಂದು ಅಂದುಕೊಂಡಿದ್ದೇವೆ. ನಿರ್ಮಾಣದ ನಂತರ ಆ ತಾಯಿ ಭುವನೇಶ್ವರಿಯನ್ನು ಪ್ರತಿದಿನ ಆರಾಧಿಸಬೇಕು ಎಂದರು. ಈ ರಥಯಾತ್ರೆಯನ್ನು ಸಂಜೆವರೆಗೂ ಸಹ ಪಟ್ಟಣ ಹಾಗೂ ತಾಲ್ಲೂಕಿನ ಪಂಚಾಯತಿ ವ್ಯಾಪ್ತಿಯಲ್ಲಿ ಮೆರವಣಿಗೆ ಮಾಡಿ ನಂತರ ಕೆಜಿಎಫ್ ತಾಲ್ಲೂಕಿಗೆ ಕಳುಹಿಸಿಕೊಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷ ಗೋವಿಂದ, ಉಪಾಧ್ಯಕ್ಷ ಚಂದ್ರವೇಣಿ ಮಂಜುನಾಥ್, ಪುರಸಭೆ ಸದಸ್ಯ ಎಸ್. ವೆಂಕಟೇಶ್,ತಹಶೀಲ್ದಾರ್ ವೆಂಕಟೇಶ್,ಇ.ಓ. ರವಿಕುಮಾರ್, ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ,ಬಿಇಓ ಗುರುಮೂರ್ತಿ, ಸಿ ಡಿ ಪಿ ಓ ಮುನಿರಾಜು, ಕೃಷಿ ಇಲಾಖೆಯ ಪ್ರತಿಭಾ,ಫೀಲ್ಡ್ ಮಾರ್ಷಲ್ ಕಾರಿಯಪ್ಪ ಶಾಲೆಯ ಅಧ್ಯಕ್ಷರಾದ ಚಂದ್ರಶೇಖರ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಗೋಪಾಲಗೌಡ, ತಾಲ್ಲೂಕು ಅಧ್ಯಕ್ಷ ಸಂಜೀವಪ್ಪ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ರವಿ,ಇನ್ಸ್ಪೆಕ್ಟರ್ ದಯಾನಂದ್ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು. ಭಾಗವಹಿಸಿದ್ದರು.