ದೇವನಹಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಜಮೀರ್ರನ್ನು ಸಂಪುಟದಿಂದ ಕೈಬಿಡಬೇಕು, ಜನವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ, ಎಂದು ಕ್ಷೇತ್ರದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.
ಅವರು ಜಿಲ್ಲಾಡಳಿತ ಭವನದ ಬಳಿ ದೇವನಹಳ್|ಳಿ ವಿಧಾನಸಭಾ ಕ್ಷೇತ್ರ ಜೆಡಿಎಸ್ ವತಿಯಿಂದ ಜಮೀರ್ ಅಹಮದ್ ಖಾನ್ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರ ವಿರುದ್ದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ರ್ಯಾಲಿ ಉದ್ದೇಶಿಸಿ ಮಾತನಾಡಿ ಜಮೀರ್ ಅಹಮದ್ ಅನ್ನ ಹಾಕಿದ ಮನೆಗೆ ಕನ್ನ ಹಾಕಿದ್ದಾರೆ, ರಾಜ್ಯದ ಜನತೆಗೆ ಪರಿಚಯಿಸಿದ ಕುಟುಂಬಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ, ಜಮೀರ್ಗೆ ಮಾನ ಇದ್ದರೆ ಕೂಡಲೆ ರಾಜೀನಾಮೆ ನೀಡಲಿ, ಬಹಿರಂಗವಾಗಿ ಜೆಡಿಎಸ್ ಮುಖಂಡರ ಕ್ಷಮೆ ಕೇಳಲಿ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ದಿನಬಳಕೆ ವಸ್ತುಗಳ ಬೆಲೆಗಳು ಗಗನಕ್ಕೇರಿಸಿದ್ದಾರೆ, ವಿದ್ಯುತ್, ಬಸ್, ಪೆಟ್ರೋಲ್ ದರಗಳನ್ನು ಏರಿಸಿ ಬಡಜನರು ಜೀವನ ನಡೆಸುವುದೇ ಕಷ್ಟವಾಗಿದೆ, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ, ರೈತರ, ಬಡವರ ಜಮೀನನ್ನು ವಕ್ಪ್ ಬೋರ್ಡ್ ಹೆಸರಿಗೆ ಸೇರಿಸಿ ನಮ್ಮ ರಾಜ್ಯದ ಲಕ್ಷಾಂತರ ಎಕರೆ ಜಮೀನನ್ನು ಕೊಳ್ಳೆ ಹೊಡೆಯಲು ಪ್ರಯತ್ನಿಸುತ್ತಿದೆ ಇದರಲ್ಲಿ ಮುಖ್ಯಮಂತ್ರಿಗಳ ಕೈವಾಡವೂ ಇದೆ, ಲಕ್ಷಾಂತರ ಬಡಜನರ ಅನ್ನಕ್ಕೂ ಕೈ ಹಾಕಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಬಿಪಿಎಲ್ ಪಡಿತರ ಕಾರ್ಡ್ಗಳನ್ನು ರದ್ದು ಮಾಡಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ದ ಕಿಡಿ ಕಾರಿದರು.
ಪ್ರತಿಭಟನೆಗೂ ಮೊದಲು ಚಪ್ಪರಕಲ್ ಬಳಿ ರಸ್ತೆಯಲ್ಲಿ ಜಮೀರ್ ಪ್ರತಿಕೃತಿ ದಹಿಸಲಾಯಿತು.ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ಸಿಲುಕಿದ್ದರೂ ಅದನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸುತ್ತಿದೆ, ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಹಾಗೂ ಅದರಲ್ಲಿರುವ ಕೆಲವು ಸಚಿವರು ಭ್ರಷ್ಠಾಚಾರದಲ್ಲಿ ಮುಳುಗಿದ್ದಾರೆ, ಅಬ್ಕಾರಿ ಇಲಾಖೆಯಲ್ಲಿ ಬಾರಿ ಅವ್ಯವಹಾರ ನಡೆದಿದೆ ಎಂದು ಬಾರ್ ಮಾಲಿಕರೇ ನೇರವಾಗಿ ತಿಳಿಸಿದ್ದರೂ ಅಬ್ಕಾರಿ ಸಚಿವರಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು.
ಇದನ್ನೆಲ್ಲಾ ನೋಡಿ ಸುಮ್ಮನಿರಲಾಗದೇ ಮಾಜಿ ಪ್ರಧಾನಿ ದೇವೇಗೌಡ, ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸಲಹೆಯ ಮೇರೆಗೆ ರಾಜ್ಯಾದ್ಯಂತ ತಾಲ್ಲೂಕು ಹಾಗೂ ಜಿಲ್ಲಾ ಜೆಡಿಎಸ್ ಘಟಕಗಳು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಹಾಗೂ ರಾಜ್ಯಪಾಲರಿಗೆ ತಲುಪಿಸಲು ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಾಶ್ರೀರವರಿಗೆ ಮನವಿ ನೀಡಲಾಯಿತು.
ಈ ಸಮಯದಲ್ಲಿ ಹಿರಿಯ ಮುಖಂಡ ಅಪ್ಪಯ್ಯಣ್ಣ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ, ತಾಲ್ಲೂಕು ಅದ್ಯಕ್ಷ, ಆರ್.ಮುನೇಗೌಡ, ಪ್ರ.ಕಾರ್ಯದರ್ಶಿ, ಜಿ.ಎ.ರವೀಂದ್ರ, ಕಾಮೇನಹಳ್ಳಿ ರಮೇಶ್, ಜೊನ್ನಹಳ್ಳಿ ಮುನಿರಾಜು, ಯೂತ್ ಅಧ್ಯಕ್ಷ ಟಿ.ರವಿ. ಬೈಚಾಪುರದ ವೇಣುಗೋಪಾಲ್, ಪುರಸಭಾ ಸದಸ್ಯ ಎಸ್.ನಾಗೇಶ್, ಸದಸ್ಯರಾದ ಪುಷ್ಪ ಲಕ್ಷ್ಮೀನಾರಾಯಣ್, ಕ್ಯಾತೇಗೌಡ, ಶಶಿಕುಮಾರ್, ಮುನಿನಂಜಪ್ಪ, ಜಗದೀಶ್, ಲಕ್ಷ್ಮಣ್, ಸೇರಿದಂತೆ ತಾಲ್ಲೂಕಿನ ಜೆಡಿಎಸ್ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು.