ಬೆಂಗಳೂರು: ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದು, ರಾಜ್ಯ ಪ್ರವಾಸಕ್ಕೆ ವಾಹನ ನೀಡದೆ ಸರ್ಕಾರ ಶಿಷ್ಟಾಚಾರ ಉಲ್ಲಂಘಿಸಿದೆ ಎಂಬ ಆರೋಪ ಕೇಳಿಬಂದಿದೆ.
ಸರ್ಕಾರ ನಡೆಗೆ ಕುಮಾರಸ್ವಾಮಿ ಅವರು ಆಕ್ರೋಶಗೊಂಡಿದ್ದು, ಕೇಂದ್ರ ಸರ್ಕಾರದ ವಾಹನದಲ್ಲೇ ಮಂಡ್ಯ, ಮೈಸೂರು ಜಿಲ್ಲೆ ಪ್ರವಾಸ ಮಾಡುತ್ತಿದ್ದಾರೆ.
ಈ ನಡುವೆ ಮಂಡ್ಯದ ಕೆ.ಆರ್.ಪೇಟೆಯಲ್ಲಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕುಮಾರಸ್ವಾಮಿಯವರು, ರಾಜ್ಯ ಸರ್ಕಾರ ನನಗೆ ಇಲ್ಲಿವರೆಗೂ ಕಾರು ಕೊಟ್ಟಿಲ್ಲ. ಹೀಗಾಗಿ, ನಮ್ಮ ಕೇಂದ್ರ ಸರ್ಕಾರದ ವಾಹನ ಬಳಕೆ ಮಾಡುತ್ತಿದ್ದೇನೆ. ಬೃಹತ್ ಕೈಗಾರಿಕಾ ಇಲಾಖೆಯ ವಾಹನ ತರಿಸಿಕೊಂಡಿದ್ದೇನೆಂದು ಹೇಳಿದರು.
ರಾಜ್ಯ ಸರ್ಕಾರ ತಮ್ಮನ್ನು ನಿರ್ಲಕ್ಷಿಸುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದರ ಬಗ್ಗೆ ನನಗೆ ತಿಳಿದಿಲ್ಲ, ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ಅದಕ್ಕೆ ಉತ್ತರಿಸಬೇಕು ಎಂದು ತಿಳಿಸಿದರು.
ಜಿಟಿ ದೇವೇಗೌಡ ಕುರಿತು ಮಾತನಾಡಿ, ಜಿಟಿಡಿ-ಜೆಡಿಎಸ್ ಸಂಬಂಧ ಗಂಡ-ಹೆಂಡತಿ ಸಂಬಂಧದಂತೆ. ಉಂಡು ಮಲಗುವವರೆಗೆ ಮಾತ್ರವೇ ಜಗಳ ಇರುತ್ತದೆ. ನಂತರ ಎಲ್ಲವೂ ಸರಿಯಾಗುತ್ತದೆ. ಅವರು ಕಾಂಗ್ರೆಸ್ಗೆ ಹೋಗುವುದಿಲ್ಲ. ನಮ್ಮೊಂದಿಗೇ ಇರುತ್ತಾರೆ. ಮುನಿಸು ಇದ್ದ ಮಾತ್ರಕ್ಕೆ ನಮ್ಮನ್ನು ಬಿಟ್ಟು ಹೋಗುತ್ತಾರೆ ಎಂದರ್ಥವಲ್ಲ ಎಂದು ಹೇಳಿದರು.
ಬಸ್ ಟಿಕೆಟ್ ದರ ಹೆಚ್ಚಳ ವಿಚಾರಕ್ಕೆ ಪ್ರತಿಕ್ರಿಯಿಸಿ, ದರ ಹೆಚ್ಚಳ ಜನಕ್ಕೆ ತಾನೇ ಮಂತ್ರಿಗಳಿಗೆ ಅಲ್ವಾಲ್ಲ, ಅವರಿಗೇನು? ಈ ಸರ್ಕಾರ ದರ ಏರಿಕೆಯ ಸರ್ಕಾರವಾಗಿದೆ. ಜನರ ಜೋಬಿಗೆ ಕೈ ಹಾಕಿ ಲೂಟಿ ಮಾಡ್ತಿದ್ದಾರೆ. ಜನಕ್ಕೆ ಕಷ್ಟ ಕೊಟ್ಟು ಖುಷಿ ಪಡೋ ಸರ್ಕಾರ ಇದು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಗ್ಯಾರೆಂಟಿಗಳಿಗೆ ಇಬ್ಬರು ಮಹನೀಯರು ಸಹಿ ಹಾಕಿದ್ದರು. ಸಿದ್ದರಾಮಯ್ಯ ಸಹಿ ಹಾಕಿದ್ದರು. ಇನ್ನೊಬ್ಬ ಮಹಾನ್ ವ್ಯಕ್ತಿ ಬಗ್ಗೆ ನಾನು ಹೇಳಲ್ಲ. ದೇಶದಲ್ಲಿ ಮನಮೋಹನ್ ಸಿಂಗ್ ಬಳಿಕ ಸಿದ್ದರಾಮಯ್ಯ ದೊಡ್ಡ ಆರ್ಥಿಕ ತಜ್ಞರು, ಅವರೇ ಅಲ್ಲವೇ ಸಹಿ ಹಾಕಿರೋದು… ಮಂತ್ರಿಗಳ ಅಭಿವೃದ್ದಿ ಆಗುತ್ತಿದೆ. ಜನಗಳ ಅಭಿವೃದ್ದಿ ಯಾರಿಗೆ ಬೇಕು? ಎಲ್ಲದಕ್ಕೂ ಕೂಡ ಪರ್ಸಂಟೇಜ್ ತಗೋಳ್ತಿದ್ದಾರೆ. ಆಶ್ರಯ ಮನೆಗಳಿಗೂ ವಿಧಾನಸಭೆಯಲ್ಲಿ ವಸೂಲಿ ಶುರು ಆಗಿದೆಯಂತೆ ಎಂದು ಆರೋಪಿಸಿದರು.
ಅಪರೇಷನ್ ಹಸ್ತ ಕುರಿತು ಮಾತನಾಡಿ, ಅದು ನಡೀತಾನೆ ಇದೆ. ನಮ್ಮಲ್ಲಿ 18 ಜನ ಶಾಸಕರಿದ್ದಾರೆ. ಒಟ್ಟಾಗಿದ್ದಾರೆ. ಅದನ್ನೇ ಹರೀಶ್ ಗೌಡ ಹೇಳಿರೋದು. ಒತ್ತಡ ಅಂತೂ ಇರತ್ತದೆ. ಅದನ್ನೇ ಬೆಳಗಾವಿಯಲ್ಲಿ ಶಾಸಕರು ಕೂತು ಮಾತನಾಡಿದ್ದಾರೆ ಅಷ್ಟೇ.. ನಮ್ಮ ಶಾಸಕರು ನಮ್ಮ ಜೊತೆ ಇರ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಹೆಚ್ಡಿ ಕುಮಾರಸ್ವಾಮಿ ಅವರು ದಿಶಾ ಸಭೆ ನಡೆಸಿದ್ದು, ಸಭೆಗೆ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಗೈರುಹಾಜರಾಗಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಕುಮಾರಸ್ವಾಮಿ ಅವರೊಂದಿಗೆ ಅಂತರ ಕಾಯ್ದುಕೊಂಡಿರುವ ದೇವೇಗೌಡ ಸಭೆಯಿಂದ ದೂರ ಉಳಿದಿದ್ದರು. ಆದರೆ ಅವರ ಪುತ್ರ, ಹುಣಸೂರು ಶಾಸಕ ಜಿ.ಡಿ. ಹರೀಶ್ ಗೌಡ ಪಾಲ್ಗೊಂಡಿದ್ದರು.