ಬೆಂಗಳೂರು: ಇತ್ತೀಚೆಗೆ ನಡೆದ ಲೋಕಸಭಾ ಕ್ಷೇತ್ರದ ಚುನಾವಣೆ ಹಾಗೂ ರಾಜ್ಯದ ಬಿಜೆಪಿಯಲ್ಲಿನ ಇಂದಿನ ಸ್ಥಿತಿಗತಿಗಳ ವಿಚಾರದ ಬಗ್ಗೆ ಬಿಜೆಪಿ ಹೈಕಮಾಂಡ್ ನಾಯಕರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಸುದೀರ್ಘ ಪತ್ರ ಬರೆದಿದ್ದಾರೆ.
ಪತ್ರದ ಪ್ರಮುಖ ಅಂಶಗಳು ಇಂತಿವೆ.
ರಾಜ್ಯದಲ್ಲಿ ಇಂದು ಬಿಜೆಪಿ ಗಟ್ಟಿಗೊಳಿಸಲು ಸಮರ್ಪಕವಾದ ನಾಯಕತ್ವ ಇಲ್ಲ. ನಾವು ಕಳೆದ ವಿಧಾನಸಭಾ ಹಾಗೂ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿಸಿದ ಮಟ್ಟ ತಲುಪಿಲ್ಲ. ಕಳೆದ ಬಾರಿ ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ 40% ಕಮಿಷನ್ ಪಡೆಯುತ್ತಿದೆ ಎಂದು ಆರೋಪಿಸಲಾಗಿತ್ತು. ಇದರ ಬಗ್ಗೆ ಯಾವುದೇ ಸಮಜಾಯಿಷಿ ನೀಡಿಲ್ಲ. ಇನ್ನು ಇದರ ಬಗ್ಗೆ ಯಾವುದೇ ನಾಯಕರು ಸರಿಯಾಗಿ ಪಕ್ಷದಲ್ಲಿ ಸಮರ್ಥನೆ ಮಾಡಿಕೊಳ್ಳದೇ ನಾವು ಎಡವಿದ್ದೇವೆ.
ಹಳೆಯ ಮೈಸೂರು ಭಾಗದಲ್ಲಿ ಸಂಘಟನೆ ಮಾಡಲು ಹೋಗಿ, ಇದ್ದ ಬೇಸ್ ಕಳೆದುಕೊಂಡಿದ್ದೇವೆ. ಇತ್ತ ಸಂಘಟನೆ ವಿಚಾರದಲ್ಲಿ ನಿಗಾ ಸಮರ್ಪಕವಾಗಿ ಎದುರಿಸುತ್ತಿಲ್ಲ. ಇದೆಲ್ಲಾ ಆದ ಬಳಿಕ ಜೆಡಿಎಸ್ ಜೊತೆಗೆ ಮೈತ್ರಿ ಮೇಲೆ ನಾವು ಹೆಚ್ಚು ಅವಲಂಬಿತವಾಗಿದ್ದೇವೆ. ಒಕ್ಕಲಿಗ ಸಮುದಾಯದ ನಾಯಕರು ಸೇರಿದಂತೆ ಯಾವ ಸಮುದಾಯದ ನಾಯಕರು ಕೂಡ ಪಕ್ಷದ ಹಿತಾಸಕ್ತಿಗೆ ದುಡಿಯುತ್ತಿಲ್ಲ. ಇತ್ತ ಚುನಾವಣೆ ಸಂದರ್ಭದಲ್ಲಿ ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಎಂಬಂತೆ ಮಾತ್ರ ಕೆಲಸ ಮಾಡಿದ್ರೆ, ನಾವು ಗುರಿ ಮುಟ್ಟುವುದು ಕಷ್ಟವಾಗಲಿದೆ ಎಂದು ಹೀಗೆ ಸಾಲು ಸಾಲು ವಿಚಾರಗಳನ್ನು ಪ್ರಸ್ತಾಪಿಸಿ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.