ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರ ಬದಲಾವಣೆಗೆ ಕೆಲ ನಾಯಕರ ಪಟ್ಟು ಹಿಡಿದಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಅವರನ್ನೇ ರಾಜ್ಯಾಧ್ಯಕ್ಷರಾಗಿ ಮುಂದುವರೆಸಲು ಹೈಕಮಾಂಡ್ ನಾಯಕರ ನಿರ್ಧಾರ ಮಾಡಿದ್ದಾರೆ. ಆದರೆ, ಅಧಿಕೃತ ಘೋಷಣೆ ಇನ್ನು ಕೆಲ ದಿನಗಳ ಕಾಲ ಮುಂದೂಡಿಕೆ ಸಾಧ್ಯತೆಯಿದೆ ಎನ್ನಲಾಗಿದೆ.
ಲಭ್ಯವಿರುವ ಬಿಜೆಪಿಯ ಉನ್ನತ ಮೂಲಗಳ ಮಾಹಿತಿ ಪ್ರಕಾರ, ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷ ಎಂದು ಘೋಷಿಸಲು ಕೆಲ ತಾಂತ್ರಿಕ ಅಡಚಣೆಗಳಿವೆ ಎಂದು ಹೇಳಲಾಗುತ್ತಿದೆ.
ದೇಶದಲ್ಲಿ ಕೆಲ ರಾಜ್ಯಗಳಿಗೆ ಇನ್ನು ರಾಜ್ಯಾಧ್ಯಕ್ಷರ ನೇಮಕ ಆಗಿಲ್ಲ.,ಇನ್ನು ಈಗಾಗಲೇ ಕೆಲ ರಾಜ್ಯಗಳಲ್ಲಿನ ಸಂಘಟನಾತ್ಮಕ ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರ ನೇಮಕವನ್ನೇ ಪಕ್ಷ ಘೋಷಿಸಿಲ್ಲ. ಲೋಕಸಭಾ ಚುನಾವಣೆಯ ಬಳಿಕ ಸಂಘಟನೆ ನೀಡಬೇಕಾದ ಒತ್ತು ಕಡಿಮೆಯಾಗಿದೆ.
ಇನ್ನು ದೆಹಲಿ ರಾಜ್ಯದ ಮುಖ್ಯಮಂತ್ರಿಗಳ ಆಯ್ಕೆ ಆಗಬೇಕಿದೆ. ಇದರ ಜೊತೆಗೆ ರಾಜ್ಯದಲ್ಲೂ ಇರುವ 39 ಸಂಘಟನಾತ್ಮಕ ಜಿಲ್ಲೆಗಳ ಪೈಕಿ 23 ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರ ಆಯ್ಕೆ ಆಗಿದ್ದು, ಅದರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧ್ಯಕ್ಷರ ಆಯ್ಕೆ ತಡೆ ಹಿಡಿಯಲಾಗಿದೆ. ಇನ್ನು ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಯಾವುದೇ ರಾಜ್ಯದಲ್ಲಿರುವ ಸಂಘಟನಾತ್ಮಕ ಜಿಲ್ಲೆಗಳ ಪೈಕಿ ಶೇ.50% ರಷ್ಟು ಆದ್ರೂ ರಾಜ್ಯಾಧ್ಯಕ್ಷರ ನೇಮಕ ಆಗಬಹುದು.
ಇಲ್ಲಿ ವಿಜಯೇಂದ್ರರ ವಿರೋಧಿ ಬಣ ಕೂಡ ಫುಲ್ ಸಕ್ರಿಯವಾಗಿದ್ದು, ಹೈಕಮಾಂಡ್ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದೆಲ್ಲದರ ಜೊತೆಗೆ ರಾಷ್ಟ್ರೀಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳು ತಲೆದೂರಿದ್ದು ಅದನ್ನೆಲ್ಲಾ ಸರಿಪಡಿಸಬೇಕಾದ ಅನಿವಾರ್ಯತೆ ಹೈಕಮಾಂಡ್ ನಾಯಕರ ಮೇಲಿದೆ.ಹೀಗೆ ಸಾಲು ಸಾಲು ಕಾರಣಗಳು ಮುಂದಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಾಧ್ಯಕ್ಷರ ಆಯ್ಕೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ.ಈ ವಾರದಲ್ಲಿ ಎಲ್ಲವೂ ಬಗೆಹರಿಯಲಿದೆ ಎಂದುಕೊಂಡಿದ್ದು, ಈ ತಿಂಗಳಾಂತ್ಯದವರೆಗೂ ಮುಂದೂಡಿಕೆಯಾದರೂ ಅಚ್ಚರಿಯಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.