ಬೆಂಗಳೂರು: ರಾಜ್ಯ ಬಿಜೆಪಿ ಯಲ್ಲಿ ತಲೆದೋರಿರುವ ಭಿನ್ನ ಮತವನ್ನು ಶಮನಗೊಳಿಸಲು ಮುಂದಾಗಿರುವ ಪಕ್ಷದ ರಾಷ್ಟ್ರೀಯ ವರಿಷ್ಠರು ಸಂಧಾನ ಸೂತ್ರವನ್ನು ರೂಪಿಸಲು ಮುಂದಾಗಿದ್ದಾರೆ.ರಾಜ್ಯ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಹಿರಿಯ ಮುಖಂಡ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನಡುವೆ ಕಾಣಿಸಿಕೊಂಡಿರುವ ಭಿನ್ನಮತ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇರುವ ಪರಿಣಾಮ ಶೀಘ್ರದಲ್ಲೇ ಭಿನ್ನಮತ ಶಮನ ಮಾಡಲು ವರಿಷ್ಠರು ಮುಂದಾಗಿದ್ದಾರೆ.
ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರ ನ್ನಾಗಿ ಮುಂದುವರಿಸಿ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಕೇಂದ್ರಕ್ಕೆ ಕರೆಸಿಕೊಳ್ಳಲು ವರಿಷ್ಠರು ಮುಂದಾಗಿದ್ದಾರೆ ಎನ್ನಲಾಗಿದೆ. ಲಭ್ಯವಿರುವ ಮಾಹಿತಿ ಪ್ರಕಾರ ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಹುದ್ದೆಯೊಂದನ್ನು ಬಸವನಗೌಡ ಪಾಟೀಲ್ ಯತ್ನಾಳ್ಗೆ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಇದೇ ಸಂದರ್ಭದಲ್ಲಿಭಿನ್ನಮತೀಯ ಪಾಳಯದಲ್ಲಿರುವ ಹಿರಿಯ ಮುಖಂಡ ಅರವಿಂದ್ ಲಿಂಬಾವಳಿಯವರಿಗೂ ಸಹ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಹುದ್ದೆಯನ್ನು ನೀಡಲು ಚರ್ಚೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದ್ದು, ಶೀಘ್ರದಲ್ಲಿ ರಾಜ್ಯ ಬಿಜೆಪಿಯಲ್ಲಿ ತಲೆದೋರಿರುವ ಭಿನ್ನಮತ ಶಮನವಾಗಬಹುದು ಎಂದು ಮೂಲಗಳು ತಿಳಿಸಿವೆ.
ಯತ್ನಾಳ್ ಅವರೊಂದಿಗೆ ಗುರುತಿಸಿಕೊಂಡಿರುವ ಕೆಲ ನಾಯಕರಿಗೆ ರಾಜ್ಯ ಬಿಜೆಪಿಯಲ್ಲೂ ಸ್ಥಾನ ಮಾನ ನೀಡಲು ಚಿಂತನೆ ನಡೆದಿದೆ ಎಂದು ಬಲ್ಲಮೂಲಗಳು ತಿಳಿಸಿವೆ.
ಬಸವನಗೌಡ ಪಾಟೀಲ್ ಯತ್ನಾಳ್ ಅವರೊಂದಿಗೆ ಗುರುತಿಸಿ ಕೊಂಡಿರುವ ಬೆಳಗಾವಿಯ ರಮೇಶ್ ಜಾರಕಿಹೊಳಿಯವರನ್ನು ಕೇಂದ್ರಕ್ಕೆ ಆಹ್ವಾನಿಸಿದರೂ ತಾವು ರಾಜ್ಯ ರಾಜಕೀಯದಲ್ಲಿ ಇರುವುದಾಗಿ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎಂದು ಅವರ ಆಪ್ತ ವಲಯ ತಿಳಿಸಿದೆ.ಒಟ್ಟಾರೆ ಮುಂದಿನ ವಾರದೊಳಗಾಗಿರಾಜ್ಯ ಬಿಜೆಪಿಯಲ್ಲಿ ಇರುವ ಅಸಮಾಧಾನಗಳು ದೂರವಾಗಲಿವೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆದಿದೆ.