ಚಿಕ್ಕಬಳ್ಳಾಪುರ: ಕರ್ನಾಟಕ ಪ್ರದೇಶ ಯೂತ್ ಕಾಂಗ್ರೆಸ್, ಯುವ ಘಟಕದ ವಿವಿಧ ಪದಾಧಿಕಾರಿಗಳಿಗೆ ನಡೆದ ಚುನಾವಣೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಮುದಾಸೀರ್ ದಾವೂದ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕರ್ನಾಟಕ ಪ್ರದೇಶ ಯೂತ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಆನ್ ಲೈನ್ ಮುಖಾಂತರ ನಡೆದ ಅಂತರಿಕ ಚುನಾವಣೆಯಲ್ಲಿ ಮುದಾಸೀರ್ ದಾವೂದ್ ತೀವ್ರ ಪೈಪೋಟಿ ನೀಡಿ ಗೆಲುವು ಸಾಧಿಸಿದ್ದಾರೆ.
ಮಾಜಿ ಜಿಲ್ಲಾ ಕಾಂಗ್ರೇಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ, ಮಾಜಿ ನಗರಸಭಾ ಸದಸ್ಯ ಹಾಗೂ ವಕೀಲ ಮೊಹಮ್ಮದ್ ದಾವೂದ್ ರವರ ಪುತ್ರ ಮುದಾಸೀರ್ ದಾವೂದ್ ಅವರು ಎನ್ ಎಸ್ ಯು ಐ, ವಿಧಾನಸಭಾ ಕ್ಷೇತ್ರದ ಯುವ ಉಪಾಧ್ಯಕ್ಷ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ಜಿಲ್ಲೆಯ ಇತಿಹಾಸದಲ್ಲಿ ಪ್ರಪ್ರಥಮ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಆಗಿದ್ದಾರೆ.
ಈ ವೇಳೆ ಕೆಪಿವೈಸಿ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುದಾಸೀರ್ ದಾವೂದ್ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಜನಗಳಿಗೆ ತಲುಪಿಸುವ ಕಾಯಕವನ್ನು ಮಾಡುವ ಜೊತೆಗೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಯುವಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಮಾಡಿಸಿ ಪಕ್ಷವನ್ನು ಕಟ್ಟುವ ಮೂಲಕ ಬಲಿಷ್ಠ ಗೊಳಿಸಲಾಗುವುದು ಹಾಗೂ ಮುಂಬರುವ ಜಿ.ಪಂ, ತಾ.ಪಂ, ಸ್ಥಳೀಯ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ನಿಟ್ಟಿನಲ್ಲಿ ತೊಡಗಿಕೊಳ್ಳಲಾಗುವುದು ಎಂದು ಹೇಳಿದರು.
ನನ್ನ ಗೆಲುವಿಗೆ ಬೆನ್ನೆಲುಬಾಗಿನಿಂತ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕರಾದ ಪ್ರದೀಪ್ ಈಶ್ವರ್, ಸುಬ್ಬಾರೆಡ್ಡಿ, ಜಿಲ್ಲಾಧ್ಯಕ್ಷ ಕೆ.ಎನ್.ಕೇಶವ ರೆಡ್ಡಿ, ಮಾಜಿ ಸಚಿವರಾದ ವಿ.ಮುನಿಯಪ್ಪ, ಶಿವಶಂಕರ್ ರೆಡ್ಡಿ ಹಾಗೂ ಕರ್ನಾಟಕ ಪ್ರದೇಶ ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಲ್ಪಾಡ್ ಹ್ಯಾರೀಸ್ ಮತ್ತು ಸ್ನೇಹಿತರಿಗೆ ದನ್ಯವಾದ ಸಲ್ಲಿಸಿದರು.